
ಎಚ್ಚೆತ್ತುಕೋ ಮತದಾರ
ಒಬ್ಬಟ್ಟಿನಲ್ಲಿಹುದು ಸಿಹಿಯು ಕಾಣ
ಒಗ್ಗಟ್ಟಿನಲ್ಲೇ ಇಹುದು ಬಲವೊ ಜಾಣ
ಒಂದಾಗದಿರೆ ದೇಶದೇಳ್ಗೆಯಾದೀತೆ?
ಮತವ ಮಾರಿದರೆ ಮಾನ ಉಳಿದೀತೆ?
ಮತಕೊಳ್ಳುವವನೇನು ತನ್ನ
ಮನೆಯಲ್ಲಿ ನೋಟುಗಳ
ಜನಹಿತಕೆ ಅಚ್ಚೊತ್ತಿ ತರುವನೇ?
ಹಣವನ್ನು ಚೆಲ್ಲುತ್ತ ತಾ ಗೆದ್ದು
ಸೌಧವನು ಸೇರಿ ಹೂಡಿದುದಕ್ಕೆ
ಚಕ್ರಬಡ್ಡಿಕೂಡಿ ಮರಳಿ ಪಡೆಯನೇ?
ಜಾತಿ ಕಿತ್ತೊಗೆವ ನೀತಿಯ ಹೇಳುತ್ತ
ಜಾತಿ ನೋಡಿ ನೀ ಮತವ ಹಾಕಿದರೆ
ಜಾತಿಗಳು ದೇಶದಿಂದಳಿವವೇನೋ?
ಜಾತಿ ಹೆಂಡವ ಕುಡಿದ ಕೋತಿ ತಾ
ಜನರನ್ನು ಜಾತಿ ಹೆಸರಲೆ ಒಡೆದು
ಬಳಗದ ಮರದಿ ಜೋತಾಡದೇನೊ?
ಸರಕಾರವೆಂಬುದು ದರ್ಪವ ತೋರಿ
ನಮ್ಮನ್ನಾಳುವ ದರ್ಬಾರಿಕೆಯಲ್ಲ,
ಮತದಾರರ ಹಿತ ಸೇವೆಗೆಂತಾಗಲಿ.
ಸೇವೆಗೈಯದೆ ತಾನು ಸ್ವಾರ್ಥವನೆ
ಸಾಧಿಸುವ ನಾಯಕನಿಗೆ ಮತದಾರ
ಕೊರಳ್ಪಟ್ಟಿ ಹಿಡಿದು ಕೇಳುವಂತಾಗಲಿ.
ತ್ರಿನೇತ್ರಜ
No comments:
Post a Comment