Wednesday 27 June 2018

           *ಪ್ರಳಯ ಮುನ್ನ*
         
ಎನೀ ವಿಪ್ಲವ ತಲ್ಲಣಿಸಿದೆ ಭಾವ
ಅರವಿಗೆಟುಕದ ಘೋರ ಸಂಭವ||
ಧರಣಿ ಎದೆಯೊಳೆನೋ ಕಂಪನ
ಪ್ರಳಯಾಗಮನ ಮುನ್ಸೂಚನ ||ಪ||

ಕತ್ತಲ ರಾತ್ರಿಯ ಬಾಗಿದ ಕತ್ತು
ಬೆವರುತ ಬೆಚ್ಚುತ ಸಾಗುತಿದೆ
ಚಂದ್ರನಿಲ್ಲದ ಕರಿಬಾನಿನಲಿ
ಧೂಮಕೇತುವು ಕಾಣಿಸಿದೆ
ಸಂಚಲನ ಮರೆತ ಸಾಗರ
ಮೌನದ ಮನೆಯ ಸೇರಿದೆ ||೧||

ಕಡಿದು ಸುಟ್ಟ ಮರದ ಆತ್ಮಗಳು
ಕಣ್ಣರಳಿಸಿ ಕೂತಿವೆ ದಿಟ್ಟಿಸಿ
ಕೊಂದ ಬೆಂದ ಮೂಕಜೀವಿಗಳ
ಪ್ರೇತಗಳು ಕಾಯ್ದಿವೆ ಕಾತರಿಸಿ
ಬಂದಿತೆ ಅಂತ್ಯವು ಮಾನವಾ?
ತಂದುಕೊಂಡೆಯಾ ಹಂಬಲಿಸಿ.||೨||
        -------------
          *ತ್ರಿನೇತ್ರಜ*
(ಶಿವಕುಮಾರ ಹಿರೇಮಠ)



*ಯೋಗಾಭ್ಯಾಸ*

(೨೧-೬-೧೮. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ)

ಬೆಳಗೆದ್ದು ದಿನವೂ
ಸೂರ್ಯೋದಯಕೆ
ಮಾಡುವ ಬನ್ನಿ ಯೋಗ
ಗಡಿಬಿಡಿ ಬದುಕಲಿ
ಸ್ವಾಸ್ಥ್ಯಕೆ ಮಾಡುವ
ಅಲ್ಪ ಸಮಯದ ತ್ಯಾಗ

ಸ್ವಚ್ಛ ಬಯಲಿನಲಿ
ನಿರ್ಮಲ ಭಾವದಿ
ಜೋಡಿಸಿ ನಮ್ಮ ಕರ
ಚಿಂತೆ ಮರೆಯುವ
ಏಕಚಿತ್ತದಿ ಮಾಡುತ
ಸೂರ್ಯ ನಮಸ್ಕಾರ

ಒತ್ತಡ ತೊರೆಯಲು
ಯೋಗ ಮಾಡುವ
ಅಂತಃಶಕ್ತಿ ವೃದ್ದಿಗೆ
ಚೈತನ್ಯಶೀಲ ಅಂಗ
ಹೊಂದುತ ಹೇಳುವ
ವಿದಾಯ ಮದ್ದಿಗೆ
--- ---- --- --- ---
ತ್ರಿನೇತ್ರಜ್
( ಶಿವಕುಮಾರ. ಹಿರೇಮಠ)

     ಕನ್ನಡ ಜ್ಯೋತಿ

ಕನ್ನಡದ ಜ್ಯೋತಿಯ ಬೆಳಗಿಸುವ
ಕರುನಾಡು ಹಣತೆ
ಅಭಿಮಾನ ತೈಲ
ಸಾಹಿತ್ಯ ಬತ್ತಿಯ ಅದ್ದಿ

ಗಡಿ ಗುಡಿಗಳಲ್ಲಿ ನೆರೆಭಾಷೆ ನುಗ್ಗಿ
ಕನ್ನಡಕೆ ಕಂಟಕವ ತರಲು ಬಿಡೆವು
ನಮ್ಮ ನೆಲ ನಮ್ಮ ಜಲ ಆಪೋಷಿಸೊ
ಪರಭಾಷೆ ಕಳೆಯನ್ನು ಕಿತ್ತೊಗೆವೆವು
ಭುವನೇಶ್ವರಿಯ ಭವ್ಯದೇಗುಲವ
ಜನ ಮನಗಳಲ್ಲಿ ನಿರ್ಮಿಸುವೆವು
ನುಡಿಯನ್ನು ಬಳಸಿ ಬರಹವನು ಕಲಿಸಿ
ಮಗು ಮಗುವಿಗಕ್ಷರವ ತುಂಬುವೆವು
ಗಣಿಪುರಗಳಾದರೂ ಬೆಳಗಾವೇ ಆದರೂ
ಪರಭಾಷೆಯಾ ಗರವ ಓಡಿಸುತ
ಕನ್ನಡದ ಜ್ಯೋತಿಯ ಬೆಳಗಿಸುವ

ನಾಡ ಕೈಂಕರ್ಯ ಆದ್ಯತೆಯ ಕಾರ್ಯ
ಕಂಕಣವ ಕಟ್ಟಿ ನಾವ್ ಮುನ್ನಡೆವೆವು
ಮಲೆನಾಡೆ ಇರಲಿ ತುಳುನಾಡೆ ಇರಲಿ
ಬಯಲು ಸೀಮೆ ಇರಲಿ ಕೂಡಿರುವೆವು
ತಾಯ ಕಿರೀಟದಿ ಜ್ಞಾನ ಪೀಠದೆಂಟು
ರತ್ನಗಳು ಹೊಳೆದು ಮಿಂಚುತಿಹವು
ಕಬ್ಬಿಗರ ಒಡಲಿದು ಕಾವ್ಯದ ಕಡಲಿದು
ನುಡಿಯೆ ಐಸಿರಿಎಮಗೆ ಅನವರತ
ಸಾಹಿತ್ಯ ಕೃಷಿಗೈದು ಅಕ್ಷರಗಳ ಬಿತ್ತುತ
ಜಗದೊಳಗೆ ಕನ್ನಡವ ಬೆಳಗುವ
ಕನ್ನಡದ ಜ್ಯೋತಿಯ ಬೆಳಗಿಸುವ

ಎದೆಯೊಳಗೆ ಉಲಿವ ಹೃದಯಕೂಡ
ಕನ್ನಡದ ನುಡಿಯನ್ನೆ ಜಪಿಸುತಿಹುದು
ಧಮನಿ ಧಮನಿಗಳಲ್ಲಿ ಹರಿವ ರಕ್ತ
ನಲ್ನುಡಿಯ ಮಿಂಚನ್ನ ಹರಿಸಿರುವುದು
ಜನ್ನುಡಿ ಕನ್ನಡ ರನ್ನುಡಿ ಕನ್ನಡ
ಪಂಪನುಡಿದಾಡಿದ ಪೊನ್ನುಡಿಯಿದು
ಕುಮಾರವ್ಯಾಸ, ಕವಿ ಕನಕದಾಸ
ಬಸವಣ್ಣ ಮಹಾದೇವೀ ವಚನವಿದು
ಹಿಂದೆಯೂ ಕನ್ನಡ ಇಂದಿಗೂ ಜನ್ನಡ
ಎಂದೆಂದೂ ಕನ್ನಡವ ಮೆರೆಸುವ
ಕನ್ನಡದ ಜ್ಯೋತಿಯ ಬೆಳಗಿಸುವ


ತ್ರಿನೇತ್ರಜ

(ಶಿವಕುಮಾರ ಹಿರೇಮಠ)
      *ದುಂಕಾರ*

ಏತಕಾದೆನೋ ಅರಿಯೆ
ನಾನಾಗಬಾರದಿತ್ತು ದುಂಬಿ
ಏಗಲಾರದ ಬದುಕಲೆಲ್ಲ
ಬರಿ ವಿಫಲತೆಗಳದೆ ದೊಂಬಿ

ಬಣ್ಣ ಬಣ್ಣದ ಹೂವುಗಳ
ಕಂಡರೇನೋ ಭಯವೆನಗೆ
ಅಂದ ಚಂದ ಕಣ್ಸೆಳೆದರೂ
ನಡುಕದೇಕೋ ಮೈಯೊಳಗೆ
ಮಧುರ ಮಧುವ ನೆನೆದಾಗ
ತನುವ ಹಸಿವು ಜೋರು
ಅಭಿಮಾನವ ಬಿಡಲೊಪ್ಪದೆ
ಕುಡಿವೆ ಒರತೆಯ ನೀರು

ಹಾರಬಲ್ಲೆನಾದರೇನು
ಎಂದೂ ಹಕ್ಕಿಯಾಗೆನೋ
ಹಾಡಬಲ್ಲೆನಾದರೇನು
ಕೋಕಿಲಕೆ ಸಮನಾಗೆನೊ
ವಿಷಕೊಂಡಿ ಅಡಿಗಿದ್ದರು
ವೃಶ್ಚಿಕವಾಗುವೆನೇನೋ
ಎಲ್ಲವಿದ್ದೂ ಗೆಲುವಿಲ್ಲದ ದುಂಬಿಯೇತಕಾದೆನೋ

    ತ್ರಿನೇತ್ರಜ

      ಎಚ್ಚೆತ್ತುಕೋ ಮತದಾರ

ಒಬ್ಬಟ್ಟಿನಲ್ಲಿಹುದು ಸಿಹಿಯು ಕಾಣ
ಒಗ್ಗಟ್ಟಿನಲ್ಲೇ ಇಹುದು ಬಲವೊ ಜಾಣ
ಒಂದಾಗದಿರೆ ದೇಶದೇಳ್ಗೆಯಾದೀತೆ?
ಮತ ಮಾರಿದರೆ ಮಾನ ಉಳಿದೀತೆ?

ಮತಕೊಳ್ಳುವವನೇನು ತನ್ನ
ಮನೆಯಲ್ಲಿ ನೋಟುಗಳ
ಜನಹಿತಕೆ ಅಚ್ಚೊತ್ತಿ ತರುವನೇ?
ಹಣವನ್ನು ಚೆಲ್ಲುತ್ತ ತಾ ಗೆದ್ದು
ಸೌಧವನು ಸೇರಿ ಹೂಡಿದುದಕ್ಕೆ
ಚಕ್ರಬಡ್ಡಿಕೂಡಿ ಮರಳಿ ಪಡೆಯನೇ?

ಜಾತಿ ಕಿತ್ತೊಗೆವ ನೀತಿಯ ಹೇಳುತ್ತ
ಜಾತಿ ನೋಡಿ ನೀ ಮತವ ಹಾಕಿದರೆ ಜಾತಿಗಳು ದೇಶದಿಂದಳಿವವೇನೋ?
ಜಾತಿ ಹೆಂಡವ ಕುಡಿದ ಕೋತಿ ತಾ
ಜನರನ್ನು ಜಾತಿ ಹೆಸರಲೆ ಒಡೆದು
ಬಳಗದ ಮರದಿ ಜೋತಾಡದೇನೊ?

ಸರಕಾರವೆಂಬುದು ದರ್ಪವ ತೋರಿ
ನಮ್ಮನ್ನಾಳುವ ದರ್ಬಾರಿಕೆಯಲ್ಲ,
ಮತದಾರರ ಹಿತ ಸೇವೆಗೆಂತಾಗಲಿ.
ಸೇವೆಗೈಯದೆ ತಾನು ಸ್ವಾರ್ಥವನೆ
ಸಾಧಿಸುವ ನಾಯಕನಿಗೆ ಮತದಾರ
ಕೊರಳ್ಪಟ್ಟಿ ಹಿಡಿದು ಕೇಳುವಂತಾಗಲಿ.

      ತ್ರಿನೇತ್ರಜ

( ಶಿವಕುಮಾರ ಹಿರೇಮಠ)
     



ಹನಿಗವನ

  ೧. ಒಂಟೆಯಾನ

ಹಸಿರಿಲ್ಲದ ಕಾಡಿನಲಿ
ಮರಳಿನ ಒಣಸಾಗರ
ಬೆವರೂ ಆವಿಯಾಯ್ತು
ಇಲ್ಲಿ ನೀರು ಬಂಗಾರ
ಉರಿರಾಜನಿಗಂಜದಿರು
ಜೊತೆಗಿರೆ ಒಂಟೆಗಳಾಧಾರ
ಮರೀಚಿಕೆಯ ಮಡಿಲಲ್ಲಿ
ಸಾಗಲಿ ನಿಲ್ಲದೆ ಸಂಚಾರ

೨.*ಕಾರಣರಾರು?*

ಹೊಲ ಬಂಜರಾದರೂ ಬಾಡಿಗೆಗೆ
ಕೇಳುವವರ ಸಂಖ್ಯೆ ಕಮ್ಮಿಯಿಲ್ಲ.
ಬೀದಿ ಕೊನೆಯ ಮನೆ ಆಕೆಯದು
ಬಾಗಿಲ ತಟ್ಟಿದರೆ ತೆರೆಯದಿರೊಲ್ಲ.

ಹನಿಗವನ ಸ್ಪರ್ಧೆ
   ೩-- *ಶರಣಾಗತ*

ಮನಕ್ಕಿತ್ತು ಗೆಲ್ಲುವ ಆತುರ,
ಆಳಬಹುದಾಗಿತ್ತು ಗತ್ತಿಂದ
ಮಣಿಸಿ ಮೂರೂ ಪುರ.
ಸುಳಿದಾಡಿ ನನ್ನ ಹತ್ತಿರ,
ದಿಕ್ಕೆಡಿಸಿ ಸಮ್ಮೋಹನದಿ
ಬಸವಳಿಸಿತೆ ನಿನ್ನ ನೂಪುರ.

############

೪-- *ಸಾಕಾರ*

ಕಿಲಕಿಲ ಕಲರವ
ಮಧುರ ಇಂಚರ
ಮೊಹಕ ನಗುವೇ
ಮನೆಗೆ ಮಂದಾರ

ಚಮ್ ಛನನವೆನ್ನೊ
ಕಾಲ್ಗಳ ಈ ನೂಪುರ
ಕಂದ ನಿನ್ನಾಟವೆಲ್ಲ
ಮುಕುಂದನ ಸಾಕಾರ.

      ಹಾಸ್ಯ ಹನಿ
     ೫ . *ಜೋಕೆ*
ಎದುರು ಮನೆ ಬಾಡಿಗೆಗೆ
ಹೊಸಬರು ಬಂದಿಹರು
ನೋಡೆ! ಎಷ್ಟು ಚಂದ ಆಕೆ.
ಅಡುಗೆ ಮನೆಯಿಂದಲೆ
ನನ್ನ ಮಡದಿ ನುಡಿದಳು
ಪೋಲಿಸ್ ಇನ್ಸ್ಪೆಕ್ಟರಂತೆ
ನಿಮ್ಮ ಮೂಳೆ ಜೋಕೆ!!

   ೬.  *ಬುದ್ದಿ ಬಂದಾಗ*
ಆಕೆ ಅಂದ್ರೆ ಪ್ರಾಣ
ಎನ್ನುತ್ತಿದ್ದ ಜಾಣ
ಮದುವೆಯಾದಮೇಲೆ
ಈಗ ಹೇಳುತಿಹನು
ತಾ ಎತ್ತು ಅವಳು ಕೋಣ.

*ತ್ರಿನೇತ್ರಜ*

############





ನ್ಯಾನೋಕಥೆ

   ತೇಲುವವರು

         ಇಬ್ಬರು ಕುಡುಕರು ಕುಡಿದ ಮತ್ತಲ್ಲಿ ಪಾಳುಬಿದ್ದ ದೇವಸ್ಥಾನದ ಕಟ್ಟೆ ಮೇಲೆ ಮಲ್ಗಿದ್ರು. ಅಲ್ಗೆ ತೂರಾಡ್ತಾ ಬಂದ ಮತ್ತೊಬ್ಬ ಕುಡುಕ ಹೇಳ್ದ "ನಗರದಾಗೆ ಕರ್ಫ್ಯೂ ಐತಂತೆ,ಇಬ್ಬರಿಗಿಂತ ಹೆಚ್ಚು ಜನ ಇದ್ದರೆ ಕಂಡಲ್ಲಿ ಗುಂಡು ಇಕ್ಕತಾರಂತೆ ಪೋಲಿಸ್ನೋರು. ನನ್ಜೊತೆ ಇಬ್ಬರೂ ಬರ್ತಿರೇನ್ರೋ"?
ಆಗ ಒಬ್ಬ ಎದ್ಬಿಟ್ಟು, " ಈ ಪೋಲಿಸ್ ನೋರ್ನ ನಂಬಕ್ಕಾಗಲ್ಲ ಬಿಡ್ಲಾ,ಗುಂಡು ಇಕ್ಕಿದ್ರೆ ಆಯ್ತಾ?ತುಂಡು ಯಾವನ್ನಿಕ್ತಾನೆ?ನಿಮ್ ತಾತಾನಾ?" ಅಂದು ಮಲ್ಕೊಂಬಿಟ್ಟ!

ತ್ರಿನೇತ್ರಜ

ಶಾಯರಿಗಳು

ಶಾಯರಿ--೧

ಗಡಿಯಾಚೆ ದೇಶದವಳಾದರೇನು? ನಾನು ನಿನ್ನನ್ನೇ ಪ್ರೀತಿಸುವೆ
ದೇಶದ್ವೇಶಗಳ ಮೀರಿ ಪ್ರೀತಿ ನಗಲಾರದೆ?
ಮಸಣದ ತುಂಬ ಗೋರಿಗಳಿದ್ದರೇನು?
ಭಯಭೀತಿ ಬಿಟ್ಟು ಹೂವು ಅರಳಲಾರದೆ?

ಶಾಯರಿ--೨

ಪ್ರಾಣದ ಮೇಲೆ ಸಾವಿಗೆ ಹಕ್ಕಿದೆ,
ನಿನಗೆ ಕೊಟ್ಟ ಮನಸಿನ ಮೇಲಲ್ಲ.
ಮಸಣವು ದೇಹವನ್ನು ಬಂಧಿಸಿಡಬಹುದು,
ನಮ್ಮಿಬ್ಬರ ಅಮರ ಪ್ರೇಮವನ್ನಲ್ಲ.

ತ್ರಿನೇತ್ರಜ

*ಒಲವಗೀತೆ*

 _*ಭಾವಗೀತೆ*_


 *ಒಲವಗೀತೆ*

ಬರೆದೆನು ನಿನಗಾಗಿ
ಈ ಒಲವ ಕವಿತೆ
ಹಾಡಲೆ ಪಂಚಮದಿ
ಓ ಪ್ರಾಣ ಕಾಂತೆ||ಪ||

ಎಂಥ ಮುದದಿಂದ
ಎಷ್ಟೋ ನಯದಿಂದ
ಪದಗಳ ನಾ ಬೆಸೆದೆ
ಕಮಲದ ದಳವಿರಿಸಿ
ಮಳೆ ಬಿಲ್ಲನು ಬಳಸಿ
ನವಿರಾಗಿ ರಚಿಸಿದೆ||೧||

ಹೃದಯ ಹೂವಿಂದ
ಭಾವ ಮಕರಂದ
ಸುಗಂಧವ ಸುರಿದೆ.
ಶಶಿಯ ನಗುವಂತ
ಜಾಜಿಯ ಹೂವಂತ
ನಿನ್ನಂದವ ತುಂಬಿದೆ||೨||

ಝರಿಯು ಗಿರಿಯಿಂದ
ತಾರೆ ಅಂಬರದಿಂದ
ಬಳಕು ಬೆಳಕನಿತ್ತಿವೆ.
ಸೆಳೆಯಿತು ನಿನ್ನಂದ
ದೇವರ ದಯೆಯಿಂದ
ಹೃದಯಗಳು ಬೆಸೆದಿವೆ||೩||

*ತ್ರಿನೇತ್ರಜ್*


 ಶಿವಕುಮಾರ. ಹಿರೇಮಠ
[02/03, 12:01 p.m.] Shivakumara Hiremath: skeditorblr@gmail.com