Sunday 31 May 2020

ಕವನ ಅವಲೋಕನ



         *ಅವಲೋಕನ*
           
ಕಡಲನೆ ಸೀಳುತ ಚುಕ್ಕಿಯ ಕುಕ್ಕುತ
ಸಾಗಿದೆ ಮನುಕುಲ ದಿಗಂತದೆಡೆ
ಇಂದ್ರಪದವಿಯ ಭ್ರಾಂತಿಯ ಹೊತ್ತು
ನುಗ್ಗಿದೆ ಮಾಯಾಲೋಕದೆಡೆ
  
ಮಹಡಿ ಮಹಲುಗಳು ಮತ್ತು ರತ್ನಗಳು
ರಂಭೋರ್ವಶಿಯರ ವೈಯ್ಯಾರ
ಅಂತರ್ಜಾಲದೊಳು ಜಗವೇ ಕೈಯಲಿ
ದಿನದಿನವೂ ನವೀನ ಅವಿಷ್ಕಾರ

ಭೂಗರ್ಭದ ಗತ ಜೈವಿಕ ದ್ರವವನು
ಹೀರಿ ಉರಿಸುತಾ ಯಂತ್ರದಲಿ
ಜಲವನೆ ಧಣಿಸಿ ಮಿಂಚು ಮಾಲೆಯ
ಹೊಂಚಿ ಹರಿಸುತ ತಂತಿಯಲಿ

ಪ್ರೀತಿಯ ಮಾರುತ ಸ್ನೇಹವ ತೂರುತ 
ಮರೆತು ಮಾನವತೆಯ ಬೇರನ್ನು
ಛೇದಿಸಿ ಅಣುವನೆ ಆಸ್ಪೋಟಿಸುತಲಿ
ಬೆಂಬತ್ತಿದೆ ಮಾಯಾ ಜಿಂಕೆಯನು

ಏನಿದು ಏನಿದು ತಾಂತ್ರಿಕ ಮಾಯೆ
ವಿಷವನು ಉಕ್ಕಿಸೋ ಆವೇಗ !
ನಶಿಸುತ ಕುಸಿದಿದೆ ಹಸಿರಿನ ಲೋಕ
ಬುವಿಗೆ ಹೆಚ್ಚಿದೆಯೋ ಉದ್ವೇಗ

ಬೇಡವೋ ಬೇಡವೋ ದುಸ್ಸಾಹಸವು
ಪ್ರಗತಿಯ ನೆಪದೊಳು ಅವಸಾನ
ಇರುವುದೊಂದೆಯೆ ಉಸಿರಿನ ಲೋಕ
ಉಳಿಸಲು ಹರಿಸೋಣ ವ್ಯವಧಾನ

*ಶಿವಕುಮಾರ ಹಿರೇಮಠ*
ದಾವಣಗೆರೆ
9945915780

Wednesday 27 May 2020

*ಉಕ್ಕಿನ ಕೋಟೆ*

           *ಉಕ್ಕಿನ ಕೋಟೆ*


 *ಉಕ್ಕಿನ ಕೋಟೆ*
ಪ್ರಬಲತೆ ಸಂಕೇತವು ಅದೋ ನಿಂದಿಹುದು 
ಬಂಡೆಗಳ ಚಿತ್ತಾರದ ಉಕ್ಕಿನ ದುರ್ಗವಿದು ||೨||
ಏಳು ಸುತ್ತು ಸುತ್ತಿಹುದು ಘಟಸರ್ಪದ ತೆರದಿ
ಬರಿದೆ ಕೋಟೆಯಲ್ಲ,ಇದು ಚರಿತೆಯ ಹಾದಿ||೪||

ಮಹಾ ಭಾರತದ ಆ  ಹಿಡಿಂಬ ವನವಿದು 
ಅಷ್ಟಾದಶಾಲಯಗಳ ದೈವ ಸನ್ನಿಧಿಯಿದು||೬||
ಗಜಾಶ್ವಗಳ ಹೆಜ್ಜೆ ಗುರುತು,ಅಂದ ಚಂದವಳ್ಳಿ
ಮಿನುಗುತಿವೆ ಪಾಳೆಗಾರಿಕೆಗೆ ಬೆಳಕ ಚೆಲ್ಲಿ||೮||

ಗಾಳಿ ಸೂಸುತಲಿತ್ತು‌ ಕೆಂಡ ಸಂಪಿಗೆ ಕಂಪು  
ಸಿದ್ಧನಾಥಲಿಂಗೇಶನ ಮುಡಿಗೆರೆದು ತಂಪು||೧೦||
ಮುರುಘರಾಜೇಂದ್ರರ ಬೃಹನ್ಮಠಕೆ ಮೂಲ
ಬಿಚ್ಚುಗತ್ತಿ ಭರಮಣ್ಣನು ಕಟ್ಟಿಸಿಹನು ಕೇಳ||೧೨||

ಮಳೆ ಬಿಸಿಲಿಗೆದೆಯುಬ್ಬಿಸಿ ನಿಂತಿಹವು ಸ್ಥಂಭ
ಸುಭದ್ರವಾದ ನವಿಲು ಉಯ್ಯಾಲೆಗಳ ಕಂಬ||೧೪||
ಪಟ್ಟ ಮಹೋತ್ಸವಕೆ ಹೊನ್ನ ಸರಪಳಿಯ ಧರಿಸಿ
ಸಿದ್ದೇಶನ ತೂಗಿದ್ದವು ಮಂಟಪದಲ್ಲಿರಿಸಿ||೧೬||

ಕಲ್ಲುಗಳೆ ಅರಳಿ ಕಮಲವಾಗಿರುವ ತೆರದಲಿ
ಗಾಳಿಗೋಪುರಗಳೆರಡು ಕಣ್ಣ ಸೆಳೆವವಿಲ್ಲಿ||೧೮||
ಉಕ್ಕಿನ ಕೋಟೆಯಿದು ಗತ ವೈಭವದಾ ಭಿತ್ತಿ
ಓಬವ್ವಳ ಸಾಹಸವು ಸರ್ವರಿಗೂ ಸ್ಪೂರ್ತಿ||೨೦||

 *ಶಿವಕುಮಾರ ಹಿರೇಮಠ*
ದಾವಣಗೆರೆ

27-5-2020