Sunday 2 December 2018

ಉತ್ಪಲ ಮಾಲಾ ವೃತ್ತದಲ್ಲಿ *ಕಿಚ್ಚನು ನುಗ್ಗಿದಾರ್ಭಟಕೆ*


  ಉತ್ಪಲ ಮಾಲಾ ವೃತ್ತದಲ್ಲಿ


*ಕಿಚ್ಚನು ನುಗ್ಗಿದಾರ್ಭಟಕೆ*

ಸಾಗರನುಬ್ಬರಬ್ಬರಕೆ ಸೊಕ್ಕುತ ತೀರವ ಮುಟ್ಟಿ ಮುತ್ತನಿ|
ಕ್ಕೋಘಿನಲೆತ್ತರೆತ್ತರಕೆ ಹಾಲ್ದೆರೆ ನುಗ್ಗುವ ಆಟವಿಟ್ಟಿರಲ್|
ಮೆಚ್ಚದೆ ಕೋಪದೊಳ್ ಉರಿವ ಕೇಸರಿಯಾ ತೆರದಿಂ ಸಮುದ್ರ ದೊಳ್|
ಕಿಚ್ಚನು ನುಗ್ಗಿದಾರ್ಭಟಕೆ ಹಕ್ಕಿಗಳೆಲ್ಲವು ಬಚ್ಚಿಕೊಂಡವೋ|

ಮೋಡಗಳಾಚೆಯಿಂ ಹೊಳೆವ ಚುಕ್ಕಿಗಳುಕ್ಕುತ ನಕ್ಕು ನಿಂದಿರಲ್|
ಮೂಡಿದ ಚಂದ್ರ ತಾಂ ರಜತ ಚಂದ್ರಿಕೆ ಚೆಲ್ವನು ಚೆಲ್ಲಿ ಸರ್ವ ಭೂ|
ಮಂಡಲದೆಲ್ಲೆಡೆ ಭ್ರಮಿತ ಜೀವಿಗಳೆಲ್ಲಕು ಧೈರ್ಯವಿತ್ತು ಪಾ|
ಲ್ಹೊಂಡದ ತಂಪಕಲ್ಪಿಸುತ ಸಾಗರನಾಸೆಗೆ ಇಂಬನಿತ್ತನೋ|

ಎಂತಹ ಚಂದವೀ ನಭವು ಎಂದೆನುತಾ ನಿಶೆ ರಂಗು ಬಿತ್ತಿದಂ|
ಕಂಡು ನರ ತ್ರಿನೇತ್ರಜನು ಅಚ್ಚರಿಗೊಳ್ಳುತ ಲಾಸ್ಯವಾಡುತಾ|
ಉಕ್ಕಿಹ ಭಾವದಾ ಎಳೆಗೆ ಕನ್ನಡ ಭಾಷೆಯ ಶಬ್ದವಿಕ್ಕುತಾ|
ಅಕ್ಕರೆ ತುಂಬಿ ತಾ ಬರೆದ ಪದ್ಯವ ಉತ್ಪಲ ಮಾಲೆ ವೃತ್ತದೊಳ್|

    *ತ್ರಿನೇತ್ರಜ್*