Tuesday 20 March 2018

ಗಝಲ್ ೨೨

ಗಝಲ್-೨೨

ನರಮನ್ಸಾ ಶಾನೆ ಬೆಳ್ಕೊಂಡ್ಬಿಟ್ಟೆ ಪಾಪಿ , ಹದ್ಮೀರಿದ್ ನಿನ್ ದುಷ್ಟ್ಬುದ್ದಿಗೆಂದೂ ಕೊನೆಯಿಲ್ಲ
ಪರಪಂಚಾನೆ ಹಾಳಾಗ್ಹೊ ದ್ರು ಯೊಚ್ನೆ ಗೀಚ್ನೆ ಯಾವ್ದುಇಲ್ಲ ,ನಿನ್ ಹುಚ್ಚಾಟಕ್ಕೆಂದೂ ಕೊನೆಯಿಲ್ಲ

ಹುಯ್ಯೋ ಮಳೆನೀರೆಲ್ಲಾ ಸೇರ್ಕೊಂಡ ತಗ್ಗಿಗ್ಹರಿಯೋದ ನಿಯಮ,ಇನ್ನೇನ್ ದಿನ್ನೆ ಹತ್ತತ್ತಾ.
ಕೆರೆಗಳ್ನುಂಗಿ ಮನೆ ಕಟ್ಕೊಂಡೆ, ನೀರ್ನುಗ್ಗಿದ್ಕೆ ಬಾಯ್ ಬಡ್ಕಳ್ಳೊ ನಾಟ್ಕಕ್ಕೆಂದೂ ಕೊನೆಯಿಲ್ಲ.

ಮರಗಳ್ನೆಲ್ಲ ಕಡ್ದಹಾಕ್ಬಿಟ್ಟೆ,ಕಾಡಿದ್ರೇನೆ ಮಳೆ ಸುರಿಯೋದು, ಇನ್ನೇನ್ ನಿನ್ ಮುಸುಡಿ ನೋಡ್ಕೊಂಡಾ
ಭೂಮಿ ಬಗ್ದು ನೀರ್ ತೆಗ್ದಾಯ್ತು ,ಕುಡಿಯೋ ನೀರ್ಗೆ ಬಡದಾಡ್ಕೊಳ್ಳೊ ದುರ್ಗತಿಗೆಂದೂ ಕೊನೆಯಿಲ್ಲ

ಕಷ್ಟಪಟ್ಟು ಸ್ವತಂತ್ರ ತಂದಿದ್ ಈ ದೇಶ ಬೇಳಸ್ಬೇಕಂತಾ, ಇನ್ನೇನ್ ಬಡವರ್ನ ಸುಲಿಯೋಕಂತಾನಾ.
ಬದುಕೊಕ್ ಲಂಚ ಸತ್ತ್ರೂ ಲಂಚ ,ದೇವ್ರ ದರ್ಷ್ನನೂ ಕಷ್ಟಾಗೋಯ್ತು ಬ್ರಷ್ಟಾಚಾರಕೆಂದೂ ಕೊನೆಯಿಲ್ಲ

ತ್ರಿನೇತ್ರಜ ಇಷ್ಟೆಲ್ಲ ಅಕ್ಷ್ರ ಗೀಚೋದು ವಸಿ ಎಚ್ರ ಮೂಡ್ಲಿ ಅಂತಾ, ಇನ್ನೆನ್ ಕೆಲ್ಸ ಇಲ್ಲಂತಾನಾ.
ಇರೊಳೊಬ್ಳೆ ಭೂಮ್ತಾಯಿ, ನಾಶಕ್ಮೊದ್ಲೆ ಎಚ್ಚೆತ್ಗೊಂಡ್ರೆ ನನ್ ಸಂತೋಷಕ್ಕೆಂದೂ ಕೊನೆಯಿಲ್ಲ.
----------------------
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday 18 March 2018

ಬಾರಯ್ಯಾ ಯುಗಾದಿ ಬಾ

ಕವನ
*ಬಾಯ್ಯಾ ಯುಗಾದಿ ಬಾ*




ನೆನಪಾಯಿತೇನು ಮತ್ತೆ
ಬುವಿಯತ್ತಣದ ಹಾದಿ
ಇಳೆಗೆ ಹಸಿರ ತುಂಬಲು
ಬಂದೆಯಾ ಯುಗಾದಿ

ಗಂಧ ಪೂಸೆ ಬಂದೆಯಾ
ಮಾವು ತೋಪಿನ ತುಂಬ?
ಮಕರಂದವ ಸುರಿದೆಯಾ
ದುಂಬಿಗಳಿಗದೇನು ಜಂಭ!

ವಧುವಾದಳು ಇಳೆಯು
ಶುಭದೊಸಗೆ ಎಂದಳು
ನಿಮ್ಮಾಟಕೆ ಕುಪಿತ ರವಿ
ಉರಿದರೆಮಗೆ ಗೋಳು

ಮುನಿಸಿನಿಂದ ಹಾಗೆಂದೆ
ಇರಲಿ ಬಾ ಇದ್ದದ್ದೆ ಇದೆಲ್ಲ
ನಿನಗಾಗಿಯೇ ಕಾದಿಹೆವು
ಅಭಿಮಾನದಿಂದ ನಾವೆಲ್ಲ

ತಳಿರು ತೋರಣಗಳಿಂದ
ಮನೆಯ ಸಿಂಗರಿಸಿಹೆವು
ಅಭ್ಯಂಜನಗೈದು ನವವಸ್ತ್ರ
ಧರಿಸಿ ಸ್ವಾಗತ ಕೋರಿಹೆವು

ನುಸುಳಿ ಬರಲಿ ಸುಳಿಗಾಳಿ
ಹೊಂಗೆ ನೆರಳಲಿ ತಂಪಾಗಿ
ಸಿಹಿಯುಂಡು ಮಧ್ಯಾಹ್ನ
ನಿದ್ರಿಸುವೆವು ಸೊಂಪಾಗಿ

ಬರದು ಬಾರದು ಬಯಸೆ
ಬರುವುದಂತೂ ತಪ್ಪದು
ಬೇವು ಬೆಲ್ಲ ಸೇರಿದ ಸವಿ
ಬದುಕಿಗೆ ರುಚಿ ತರುವುದು
🌳🌴🌳🌱🌿☘🌳🌴🌳
✍🏼 ತ್ರಿನೇತ್ರಜ್.

Saturday 17 March 2018

ಯುಗಾದಿಯಾಗಮನ

ಯುಗಾದಿಯಾಗಮನ

ಮತ್ತೆ ಬಂತು ಯುಗಾದಿ
ನವ ಸಂವತ್ಸರದಾದಿ ||ಪ||

ಚೈತ್ರನಿತ್ತ ಉಡುಗೊರೆ
ವನಸಿರಿಗೆ ಹೊಸಸೀರೆ
ವರುಷದಷ್ಟು ಹಳೆ ಎಲೆಗಳ
ಕಳೆದು ನಿಂತಳು ಇಳೆ
ಮತ್ತೆ ಜವ್ವನದ ಕಳೆ||೧||
ಶುಕ ಪಿಕಗಳ ಹಿಮ್ಮೇಳ

ಉಸಿರೇರಿಸುವ ಝಳ
ವಸಂತ ಬಂದ ಸಂಭ್ರಮಿಸಿ
ಚಿಗುರೆಲೆಗಳ ಚುಂಬಿಸಿ
ತರುಲತೆ ಮೈ ಪುಳಕಿಸಿ||೨||

ಪ್ರತಿ ವರುಷ ಹೊಸ ಹರುಷ
ತೊಡೆವುದು ಹಳೆ ಕಲ್ಮಷ
ಕಹಿಯ ಮರೆವ ನಾವೆಲ್ಲ
ಭವಿತವನು ಬಲ್ಲವರಿಲ್ಲ
ಬೇವುಬೆಲ್ಲ ಸಮ ಎಲ್ಲ||೩||

✍ ತ್ರಿನೇತ್ರಜ

ಶಿವಕುಮಾರ. ಹಿರೇಮಠ.

ಮರೆತೆಯಾ?

ಭಾವಗೀತೆ


      *ಮರೆತೆಯಾ?*
ತಾಯ ಮಮತೆ ಪ್ರೀತಿಯನ್ನೆ
ಮರೆತು ಹೋದೆಯಾ.
ಮಡದಿ ಸೆರಗ ಹಿಡಿದು ಅಲೆವ ದಾಸನಾದೆಯಾ.
ಹೊತ್ತು ಹೆತ್ತ ದೇವತೆಯ
ಕಾಲೊತ್ತಲೆಲ್ಲಿದೆ ಸಮಯ
ಅಂದ ಚಂದ ತುಂಬಿ ನಿಂತ
ಅಮ್ಮಾವ್ರಗಂಡ ಆದೆಯಾ
ತೆರೆಯೊ ಒಳಗಿನಾ ಕಣ್ಣು
ಅವ್ವ ಜೀವ ಕೊಟ್ಟ ಹೆಣ್ಣು||೧||
ಸಂಸಾರ ಒಂದು ತಕ್ಕಡಿ
ಸಮದೂಗಿಸಿ ನೀ ಹಿಡಿ
ಹೆತ್ತಮ್ಮಗೆ ನೋವ ನೀಡಿ
ನರಕ ಬೇಡಬೇಡಾ ಕೋಡಿ‌
ಮನದ ಹಿಡಿತ ಸಾಧಿಸು
ಅರಿತು ಬಾಳ ಸಾಗಿಸು ||೨||
********************
✍ ತ್ರಿನೇತ್ರಜ್.
ಶಿವಕುಮಾರ. ಹಿರೇಮಠ.

ಗುಟ್ಟು ರಟ್ಟಾದಾಗ

ನೀಳ್ಗತೆ ಸ್ಪರ್ಧೆಗೆ

*ಗುಟ್ಟು ರಟ್ಟಾದಾಗ*
    ಬೆಳಿಗ್ಗೆಯೇ ಪಟ್ಟಣಕ್ಕೆ ಬಂದ ರಾಮಣ್ಣ ಮಗಳ ಮನೆ ತಲುಪುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ಕುಡಿಯಲು ಕಾಫಿ ಕೊಟ್ಟ ಮಗಳು ನೇರವಾಗಿ ಕೇಳಿಯೇ ಬಿಟ್ಟಳು 
   "ಏನಪ್ಪಾ , ಈಗ ಬಂದ ವಿಷಯ "
           ಕೊಂಚ ಇರುಸು ಮುರುಸಾದರೂ ಅನಿವಾರ್ಯವಾಗಿದ್ದರಿಂದ ಸಾವರಿಸಿಕೊಂಡ ರಾಮಣ್ಣ ಮೆಲು ಧ್ವನಿಯಲ್ಲೇ ಹೇಳಿದ." ನಿಮ್ಮ ಅಮ್ಮನಿಗೆ ಹುಷಾರಿಲ್ಲಮ್ಮ , ತುರ್ತಾಗಿ ಆಪರೇಷನ್ ಮಾಡಿಸಬೇಕಾಗಿದೆ. ಸ್ವಲ್ಪ ಹಣ ಕಡಿಮೆಯಾಗಿತ್ತು. ಅದಕ್ಕೆ ,ಅಳಿಯಂದಿರ ಹತ್ತಿರ.."
         ಅರ್ಧಕ್ಕೆ ಬಾಯಿ ಹಾಕಿದ ಮಗಳು "ಅಯ್ಯೋ ಅಪ್ಪ! ನಮ್ ಹತ್ರ ಈಗ ಎಲ್ಲಿ ಹಣವಿದೆ? ಅಪ್ಪ ,ನಮ್ಮ ಮನೆ ಆಲ್ಟ್ರೇಷನ್  ಮಾಡಿಸೋದಿದೆ. ನಮಗೇ ನೂರಾರು ತಾಪತ್ರಯಗಳಿವೆ. ಅಲ್ಲದೇ, ಬೀಗರ ಹತ್ತಿರ ಹಣ ಕೇಳಿದರೆ ಏನು ಚೆನ್ನ ನೀನೇ ಯೋಚ್ನೆ ಮಾಡು. ನನ್ನ ಪುಣ್ಯ, ನಮ್ಮ ಯಜಮಾನ್ರು ವರದಕ್ಷಿಣೆ  ಗಿರದಕ್ಷಿಣೆ ಅಂತ ಪೀಡಿಸಿ ನನ್ನ ತವರು ಮನೆಗೆ ದಬ್ಬೋದಿಲ್ಲ.ಹಾಗಂತ ಅವರ ಹತ್ತಿರ ಹಣ ಕೇಳುವುದು ಎಷ್ಟು ಸರಿ"? ಎಂದುಬಿಟ್ಟಳು.
            ರಾಮಣ್ಣನ ಬಾಯಲ್ಲಿ ತೇವ ಆರಿತು. ‍"ಹಾಗೇನಿಲ್ಲ ತಾಯಿ, ಬೇರೆ ಕಡೆಗೂ ಪ್ರಯತ್ನ ಮಾಡಿದ್ದೇನೆ. ಏನೋ, ಒಂದು ಮಾತು ಇರಲಿ ಅಂತ ನಿನ್ನ ಹತ್ತಿರ ಕೇಳಿದೆ ಅಷ್ಟೇ.ಬೇಜಾರಾಗ್ಬೇಡಮ್ಮ" ಎಂದು ಹೇಳಿ ಹೊರಡಲು ಅನುವಾದ.
     "ಇರಪ್ಪ , ಸ್ವಲ್ಪ ತಿಂಡಿ ತಿಂದು ಹೋಗುವಿಯಂತೆ" ಎಂದು ಮಗಳು ಅಡುಗೆ ಮನೆಯತ್ತ ನಡೆದಳು. ತಿಂಡಿಯ ತಟ್ಟೆಯೊಂದಿಗೆ ಹೊರಬರುವಷ್ಟರಲ್ಲಿ ರಾಮಣ್ಣ ಅಲ್ಲಿರಲಿಲ್ಲ.
      "ಸುಕನ್ಯಾ" , ಹೆಸರಿಗೆ ತಕ್ಕಂತೆ ಸುಂದರ ಹೆಣ್ಣಾಗಿದ್ದಳು. ರಾಮಣ್ಣ- ಪುಟ್ಟಮ್ಮ ದಂಪತಿಗಳ ಒಬ್ಬಳೇ ಮಗಳು. ಬಣ್ಣದ ಲ್ಲಾಗಲಿ ಹೋಲಿಕೆ ಯಲ್ಲಾಗಲಿ ಇವಳು ಅವರಿಬ್ಬರಲ್ಲಿ ಯಾರನ್ನೂ ಹೋಲುತ್ತಿರಲಿಲ್ಲ. ರೈತನಾಗಿದ್ದ ರಾಮಣ್ಣನು ಇದ್ದ ಎರಡು ಎಕರೆ ಜಮೀನಿನಲ್ಲಿ  ಒಣ ಬೇಸಾಯ ಮಾಡಿಕೊಂಡು ಬಂದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದನು. ಇದ್ದೂರಲ್ಲಿ ಮಗಳನ್ನು ಶಾಲೆಗೆ ಕಳುಹಿಸಿ, ಓದಲು ಪ್ರೋತ್ಸಾಹ ನೀಡಿದ್ದ. ನಂತರ ಅವಳು ,ಪಟ್ಟಣದ ಕಾಲೇಜಿಗೆ ಸೇರಲು ಬಯಸಿದಾಗ ಪುಟ್ಟಮ್ಮನ ವಿರೋಧವ ಲೆಕ್ಕಿಸದೆ ಅದಕ್ಕೂ ಒಪ್ಪಿದ್ದ. ಕಂಪ್ಯೂಟರ್ ಕೋರ್ಸ್‌ ಮಾಡುತ್ತೇನೆ ಎಂದಾಗಲೂ ಬೇಡವೆನ್ನಲಿಲ್ಲ. ಮಗಳ ಮೇಲೆ ಅಷ್ಟೊಂದು ಅಕ್ಕರತೆ ಅವನಿಗೆ.
      ಕಂಪ್ಯೂಟರ್ ಕೋರ್ಸ್‌ಗೆ ಸೇರಿದ ಮೇಲೆ ಸುಕನ್ಯಾಳ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಗಾಳಿ ಬೀಸಿತು. ಆ ಕಂಪ್ಯೂಟರ್  ತರಬೇತಿ ಕೇಂದ್ರ ನಡೆಸುತ್ತಿದ್ದವನು ಮನೋಹರ ಎಂಬ ಅವಿವಾಹಿತ,ಸ್ಪುರದ್ರೂಪಿ ಯುವಕ. ಬುದ್ಧಿವಂತಳೂ, ಸುಂದರಿಯೂ ಆಗಿದ್ದ ಸುಕನ್ಯಾ ಅವನಿಗೆ ತುಂಬಾ  ಇಷ್ಟವಾಗಿದ್ದಳು.ಕ್ರಮೇಣ ಅವಳ ಸ್ನೇಹ ಸಂಪಾದಿಸಿ  ಸಲುಗೆ ಬೆಳೆಸಿ ಹತ್ತಿರವಾದ. ಒಂದು ವರ್ಷದ ನಂತರ ಧೈರ್ಯ ಮಾಡಿ ಒಂದು ದಿನ "ಸುಕನ್ಯಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀನು ಒಪ್ಪಿದರೆ ಮದುವೆಯಾಗಬೇಕೆಂದಿರುವೆ" ಎಂದು ಅವಳ ಮುಂದೆ ಹೇಳಿದಾಗ ಸುಕನ್ಯಾ ನಾಚಿ  ನೀರಾಗಿದ್ದಳು.    ಸದಾಕಾಲ ಶ್ರೀಮಂತಿಕೆಯ ‌‌‌ಕನಸು ಕಾಣುತ್ತಿದ್ದ ಅವಳಿಗೆ,'ಬಯಸಿದ ಬಳ್ಳಿ ಕಾಲಿಗೆ ತೊಡರಿದಂತೆ' ಎನಿಸಿತ್ತು.ಮುಂದಾರು ತಿಂಗಳುಗಳು ಪ್ರೀತಿ ಪ್ರಣಯದಲ್ಲಿ ಕಳೆದು ಹೋದವು. ಅವರಿವರಿಂದ ರಾಮಣ್ಣನ ಕಿವಿಗೆ ಈ ವಿಷಯ ತಲುಪುವಷ್ಟರಲ್ಲಿ ತುಂಬಾ ತಡವಾಗಿತ್ತು.
       "ನಾವು ಬಡವರಮ್ಮ ; ಶ್ರೀಮಂತರ ಮನೆತನದ ಸಂಬಂಧ ನಮ್ಮಿಂದ ಆಗದ ಮಾತು ತಾಯೆ.  ನಮ್ಮ ಗೌರವ ಗಾಳಿಗೆ ತೂರಬೇಡಮ್ಮ" ಎಂದು ಮಗಳಿಗೆ ಬುದ್ದಿ ಹೇಳಿದ್ದು 'ನೀರಲ್ಲಿ ಹೋಮ ಮಾಡಿದಂಗೆ' ಆಗಿತ್ತು.ಅವಳು ಮನೋಹರನ ಧ್ಯಾನ ನಿಲ್ಲಿಸಲಿಲ್ಲ. ಕಾಲೇಜಿಗೆ ಹೋಗದಂತೆ ಪುಟ್ಟಮ್ಮನೂ ಮಗಳಿಗೆ ತಾಕೀತು ಮಾಡಿ ಮನೆಯಲ್ಲೇ ಉಳಿಸಿಕೊಂಡಳು. ಪರೀಕ್ಷೆಗೆ, ಮಗಳ ಬೆಂಗಾವಲಾಗಿ ತಾನೂ ಹೋಗಿ ಬಂದಳು. ಪರಿಣಾಮ ಮಾತ್ರ ಉತ್ತಮವಾಗಿರಲಿಲ್ಲ‌. ಪರೀಕ್ಷೆಯಲ್ಲಿ ಎರಡು ವಿಷಯಗಳಷ್ಟೇ ಪಾಸಾದವು.
          ಸುಕನ್ಯಾಳ ಅದೃಷ್ಟ ಗಟ್ಟಿಯಾಗಿತ್ತು.ಮನೋಹರನ ಮನೆಯಿಂದ ಇವರ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ಟಿತ್ತು. ಹತ್ತಾರು ಜನ ಸೇರಿ ರಾಮಣ್ಣನನ್ನು ಒಪ್ಪಿಸಿಯೇಬಿಟ್ಟರು.
          ಶ್ರೀಮಂತರ ಸಂಬಂಧ ಬಂದಿದ್ದಕ್ಕೆ ರಾಮಣ್ಣನಿಗೆ ಒಂದು ಕಡೆ ಸಂತೋಷವಾದರೂ, ಅವರಿಗೆ ತಕ್ಕಂತೆ ಮದುವೆ ಮಾಡಿಕೊಡಲು ಆಗುವ ಖರ್ಚು ವೆಚ್ಚದ ಚಿಂತೆ ಕಾಡತೊಡಗಿತು.ಜಮೀನಿನ ಮೇಲಿನ ಸಾಲ ತೀರದೆ, ಸರ್ಕಾರ ಸಾಲ ಮನ್ನಾ ಮಾಡೀತೆಂದು ಕಾಯುತ್ತಿದ್ದವನಿಗೆ ಮಗಳ ಮದುವೆ ಹೇಗೆ ಮಾಡಬೇಕೆಂಬುದೇ ಹಗಲು-ರಾತ್ರಿಯ ಆಲೋಚನೆಯಾಗಿಬಿಟ್ಟಿತ್ತು.
    
        ಗಂಡನಿಗೆ ಧೈರ್ಯ ತುಂಬಿದ ಪುಟ್ಟಮ್ಮ,  "ಬೇಕಾದರೆ ಮನೆ ಅಡವಿಟ್ಟು ಮಗಳ ಮದುವೆ ಮಾಡಿ ಬಿಡೋಣ.ನಮ್ಮ ಅದೃಷ್ಟಕ್ಕೆ ಒಳ್ಳೆಯ ಸಂಬಂಧವೇ ಮನೆ ಬಾಗಿಲಿಗೆ ಬಂದಿದೆ. ಎಲ್ಲಾ ಆ ದೇವರ ಕೃಪೆ.ನಾಳೆಯೇ ಬ್ಯಾಂಕಿಗೆ ಹೋಗಿ ವಿಚಾರಿಸಿ" ಎಂದು ಹುರುದುಂಬಿಸಿದಳು.  
         ಮನೆಯನ್ನು ಅಡವಿಟ್ಟು , ಹಲವೆಡೆ ಸಾಲ ಸೋಲ ಮಾಡಿದ, ದಂಪತಿಗಳು , ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಚೆಂದವಾಗಿ ಮದುವೆ ಮಾಡಿಕೊಟ್ಟರು.ಕನ್ಯಾದಾನ ಮಾಡಿದ ತೃಪ್ತಿ ಯಾಯಿತು ಆ ಎರಡೂ ಹಿರಿಯ ಜೀವಗಳಿಗೆ.
      ಗಂಡನ ಮನೆ ಸೇರಿದ ಸುಕನ್ಯಾ ತುಂಬಾ ಬದಲಾಗಿ ಹೋದಳು. ದೀಪಾವಳಿ ಹಬ್ಬಕ್ಕೆ ತವರು ಮನೆಗೆ ಬರಲೂ ನಿರಾಕರಿಸಿಬಿಟ್ಟಳು.
     ಇತ್ತ ಪುಟ್ಟಮ್ಮನ ಆರೋಗ್ಯ ದಿನೇದಿನೇ ಕ್ಷೀಣಿಸತೊಡಗಿತು. ಸಣ್ಣಪುಟ್ಟ ಚಿಕಿತ್ಸೆಗಳಿಂದ ಏನೂ ಪ್ರಯೋಜನವಾಗಲಿಲ್ಲ. ಅಲ್ಪಸ್ವಲ್ಪ ಹಣ ಜೋಡಿಸಿ ದೊಡ್ಡ ಆಸ್ಪತ್ರೆಗೆ ತೋರಿಸಿದಾಗ ರಾಮಣ್ಣನಿಗೆ ಆಘಾತ ಕಾದಿತ್ತು. ವೈದ್ಯರು "ಗರ್ಭಕೋಶ ಕ್ಯಾನ್ಸರ್ ಆಗಿದೆ. ಆದಷ್ಟು ಬೇಗ ಆಪರೇಷನ್ ಮಾಡಿಸದಿದ್ದರೆ ಅಪಾಯವಿದೆ" ಎಂದಿದ್ದರು. ಹಳೆಯ ಸಾಲವೇ ತೀರದಿರುವಾಗ ಈಗ ಎಲ್ಲಿಂದ ಹಣ ತರುವುದೆಂದು ರಾಮಣ್ಣನಿಗೆ ತಿಳಿಯದಾಗಿತ್ತು.ಅದಕ್ಕೆ ಇಂದು ಮಗಳ ಮನೆ ಬಾಗಿಲು ತಟ್ಟಿದ್ದ.ಮುಂದೆ ಜಮೀನು ಮಾರಿ ಹಣ ತೀರಿಸಿದರಾಯಿತು ಎಂದುಕೊಂಡಿದ್ದ.
       ನಿರಾಶೆಯಿಂದ ಬಸ್ ನಿಲ್ದಾಣದತ್ತ ಬರುತ್ತಿರುವಾಗ ಎದುರಿಗೆ ಬಂದ ರಾಮಣ್ಣನ ಆಪ್ತ ನಾಗಣ್ಣ ,ಇವನ ಸಪ್ಪೆ ಮೋರೆ ನೋಡಿ, ವಿಷಯ ಏನೆಂದು ವಿಚಾರಿಸಿದ. 
     ದುಃಖ ತಾಳಲಾಗದೆ ರಾಮಣ್ಣ ಎಲ್ಲವನ್ನು ಅರುಹಿ ಅತ್ತುಬಿಟ್ಟ. ಅವನನ್ನು ಸಮಾಧಾನ ಪಡಿಸಿದ ನಾಗಣ್ಣ , "ದೇವರಿದ್ದಾನೆ ,ಎಲ್ಲ ಸರಿ ಹೋಗುತ್ತೆ; ಚಿಂತಿಸಬೇಡ. ನೀನೀಗ ಊರಿಗೆ ಹೋಗು.ನಾನು ಸಂಜೆಗೆ ಭೇಟಿಯಾಗುತ್ತೇನೆ.ಏನಾದರೂ ಮಾಡಿದರಾಯಿತು.ಧೈರ್ಯವಾಗಿರು" ಎಂದು ಕಳುಹಿಸಿಕೊಟ್ಟ.
      ಅಲ್ಲಿಂದ ನಾಗಣ್ಣ ನೇರವಾಗಿ ಸೌಜನ್ಯಾಳ ಮನೆಗೆ ಬಂದ.
"ಓಹೋ! ಅಪ್ಪ ಈಗ ಹಣ ಕೇಳಲೆಂದು  ನಿನ್ನನ್ನು ಕಳಿಸಿದರೇನು?" ಎಂದು ಸುಕನ್ಯಾ ಖಾರವಾಗಿಯೇ  ಕೇಳಿದಳು.
         "ಅದಕ್ಕಲ್ಲಮ್ಮ , ನಿನಗೊಂದು ವಿಷಯ ಹೇಳುವುದಿತ್ತು. ಅದಕ್ಕೆ ಬಂದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರಗಾಲ ಬಂದು ನಮ್ಮ ಊರಿನ ಅನೇಕರು ಗೋವಾಕ್ಕೆ ದುಡಿಯಲೆಂದು ಗುಳೆ ಹೋಗಿದ್ದೆವು.ಕೆಲವು ತಿಂಗಳ ನಂತರ ಉಳಿದವರು ಊರಿಗೆ ಮರಳಿದರು. ಆದರೆ ನಾನು , ನನ್ನ ಹೆಂಡತಿ, ನಿಮ್ಮ ಅಪ್ಪ-ಅಮ್ಮ ಅಲ್ಲಿಯೇ ದುಡಿದರಾಯಿತು ಎಂದು ಉಳಿದುಕೊಂಡೆವು. ಒಂದು ರಾತ್ರಿ ನಾವು ಗುಡಿಸಲಿನಲ್ಲಿ ಮಲಗಿದ್ದಾಗ ಜೋರಾಗಿ ಅಳುತ್ತಿರುವ ಮಗುವಿನ ಧ್ವನಿ ಕೇಳಿಸಿತು. ನಾನು  ಹೊರಗೆ ಬಂದು ನಿಮ್ಮಪ್ಪನನ್ನ ಕರೆದೆ.ಇಬ್ಬರು ಬಂದು  ನೋಡಿದಾಗ, ಯಾರೋ ಮಗುವನ್ನು ಕಸದ ತೊಟ್ಟಿಯಲ್ಲಿ ಹಾಕಿ ಹೋಗಿದ್ದರು. ಮಗುವನ್ನೆತ್ತಿಕೊಂಡ ನಿಮ್ಮಪ್ಪ ಗುಡಿಸಲಿಗೆ ತಂದಾಗ,ಮಕ್ಕಳಿಲ್ಲದ ಪುಟ್ಟಮ್ಮ ತಾನೇ ಸಾಕುತ್ತೇನೆಂದಳು. ಒಂದು ವರ್ಷ ಅಲ್ಲೇ ಕಳೆದು ಊರಿಗೆ ಬಂದೆವು. ಈ ವಿಷಯ ನಮ್ಮನ್ನು ಬಿಟ್ಟು ಇನ್ನಾರಿಗೂ ಗೊತ್ತಿಲ್ಲ.ಆ ಅನಾಥ ಮಗು ನೀನೇ ಕಣಮ್ಮ .ಇಂದು ನೀನು ರಾಮಣ್ಣನ ಮನಸ್ಸು ನೋಯಿಸಿದ್ದು ನನಗೆ ತುಂಬಾ ಬೇಸರ ತರಿಸಿತು. ಹಣವಿಲ್ಲದಿದ್ದರೂ ಒಂದೆರಡು ಒಳ್ಳೆಯ ಮಾತು ಮಾತಾದರೂ ನಿನ್ನ ಬಳಿ ಇಲ್ಲವಲ್ಲ. ನಿನ್ನ ತಪ್ಪಿಗೆ ಮೊದಲು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳು"   ಎಂದು ನಾಗಣ್ಣ ಮಾತು ಮುಗಿಸಿದಾಗ ಸೌಜನ್ಯಾಳಿಗೆ ನೂರು ಸಿಡಿಲು ಒಂದೇ ಬಾರಿಗೆ ಬಡಿದಂತಾಗಿತ್ತು.
.....................................
✍ ಶಿವಕುಮಾರ. ಹಿರೇಮಠ.
ಗೌರಿಬಿದನೂರು.

*ಸಾಗರೋಲ್ಲಂಘನ*

*ಸಾಗರೋಲ್ಲಂಘನ*
[04/02, 1:59 p.m.]


ಲಂಕೆಯ ತಲುಪುವ ಯತ್ನಕೆ
ಸಾಗರನಾದನು ಅಡ್ಡಿ
ವಾನರ ಬಳಗ ಮಂಕಾಯಿತು
ಮನದಿ ಶಂಕೆಯು ಮೂಡಿ

ರಾಮನ ಸೇವೆಗೆ ಆತುರ ಮನದಿ
ದೃಷ್ಟಿಗೆ ನಿಲುಕದೆ ಹರಡಿದೆ ಶರಧಿ
ಸಂಶಯ ಮೂಡಿತು ಮೋಡದ ತೆರದಿ
ಯೋಚಿಸಿ ನಿಂತನು ಸಾಗರ ತಟದಿ

ಜಾಬವಂತನು ತುಂಬಲು ಧೈರ್ಯ
ನೆನಪಿಸಿಕೊಂಡನು ಬಾಲ್ಯದ ಶೌರ್ಯ
ಬೆಳೆದು ನಿಂತನು ವೀರ ಕಪಿವರ್ಯ
ಅಣಿಯಾದ ನೆನೆದು ಸ್ವಾಮಿಕಾರ್ಯ

ಛಾಂಗನೆ ಹಾರಿದ ಹನುಮಂತ
ಸೀಮೋಲಂಘಿಸಿ ಧೀಮಂತ
ಸೀತೆಯ ಅರಸಲು ಶರವೇಗದಲಿ
ಬಾನಿಗೆ ಚಿಮ್ಮಿದ ಬಲವಂತ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

ನೀಡೆನಗೆ ಅಭಯ




*ನೀಡೆನಗೆ ಅಭಯ*

ಇದೆಂತ ಮೋಹ
ನಿನ್ನ ಮನದಲಿ
ಮುದ್ರೆಯಾಯಿತು
ಅದೆಂತ ಶಕ್ತಿ
ನಿನ್ನ ಎದೆಯಲಿ
ಹಚ್ಚೆಯಾಯಿತು||ಪ||

ಸೀತಾ ರಾಮರ
ಇರುವ ತೋರಿದೆ
ಎದೆಯನೆ ತೋಡಿ
ರಾಮ ನಾಮವೆ
ಸಾಕೆಂದೆನುವೆ
ಅದೇನು ಮೋಡಿ||೧||
ನಿನ್ನಂತೆನಗೆ
ಆಗಲಾಸೆಯು
ನೀಡೆನಗೆ ಅಭಯ
ಮನ ನಿನ್ನನ್ನೆ
ತುಂಬಿಕೊಳ್ಳಲು
ಹರಸು ಆಂಜನೇಯ||೨||
✍ ತ್ರಿನೇತ್ರಜ್
ಶಿವಕುಮಾರ ಹಿರೇಮಠ

Tuesday 13 March 2018

*ಅವಸರಿಸು ನೇಸರ *


*ಅವಸರಿಸು ನೇಸರ*
[17/12/2017, 8:17 p.m.]

ಅವಸರಿಸು ನೇಸರ
ಏಕಿಷ್ಟು ನಿಧಾನ..
ಸುಸ್ತಾಗಿಹರೆಲ್ಲ ಅಲ್ಲಿ
ದುಡಿದು ಹರಿಸಿ ಬೆವರ.
ನಿಂತಿದೆ ನಭದಲಿ
ಹಕ್ಕಿಗಳ ಸಂಚಾರ..

ಮರೆಯಾಗು, ಬೇಗನಡಿ
ನಿನ್ನಿಂದಾಗಿ ಬೆನ್ನು ಸುಟ್ಟಿದೆ.
ಉರಿದೆಯಲ್ಲ ಬೆಂಕಿಯಂದದಿ,
ನಿನ್ನಿಂದ ಬುವಿ ಬಿರಿದಿದೆ.
ಕಪ್ಪಿಟ್ಟ ಬಡ ಚರುಮದಿಂದ
ಕಷ್ಟದ ಬೆವರು ಹರಿದಿದೆ.

ಹಾರದೆ ಕುಂತಿವೆ ಪಕ್ಷಿಗಳು
ತೊರೆದು ಬದುಕ ಬಾನನೆ.
ಕತ್ತಲೆ ಬರಲಿ ದಾರಿ ಬಿಡು
ಹೊಳೆಯಲಿ ಚುಕ್ಕಿ ಒಡನೆ.
ಆವಿಯಾಯ್ತು ಬೆಂದ ನೀರು
ಹೋಗು ಭಾಸ್ಕರ ಬೇಗನೆ.

ಶಪಿಸಿ ನಿಲ್ಲದಿರು ಬೇಸರದಿ
ತಂಪಾದಿತು ನೀನಿಲ್ಲದಾಗಸವು.
ನೀ ಹೊರಡೆ ಬಂದು ಚಂದ್ರ
ತಡೆವ ದುಡಿವವರ ಅಳುವು
ವೈಶಾಖದ ಮೂಢತೆಗೆ
ಜಲಚರದಳಿವು
ಬೇಗ ಜಾರು ಹುಡುಕಬೇಕಿದೆ
ಗಾಳಿಯ ಸುಳಿವು


✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.

Monday 12 March 2018

*ಅವಳ ಕೆಣಕು*


*ಅವಳ ಕೆಣಕು*

ನನ್ನ ಕಾಲ್ಗೆಜ್ಜೆಯ
ನಾದಕೆ ಕಿವಿಗೊಡದ
ಒಲವಿನರಿವೇ ಇಲ್ಲದ
ಅರಸಿಕ ನೀನಾರೋ?
ತುಂಬಿದ ಹರೆಯವ
ಕಣ್ಣಂಚಲೂ ಅಳೆಯದೆ
ಕಲ್ಲುಮನದ ಅಲ್ಪ
ಅಮಾಯಕ ನೀನಾರೋ?
ನವ ವಸಂತನ ಸೆಳೆಯಲು
ಹಸಿರ ಹೊದ್ದು ನಿಂತ ಇಳೆ
ನನ್ನನೊಮ್ಮೆ ನೋಡಿ
ಅಸೂಯೆಯಲಿ ಬೆಂದಳು
ನೈದಿಲೆಯ ನಾಚಿಸುವ
ನನ್ನ ಮುಖಾರವಿಂದಕೆ
ಸಮವಾಗದೆ ಮಂಕಾಯ್ತು
ಚಂದಿರನ ಬೆಳದಿಂಗಳು.
ಲತೆಯನು ಹೋಲುವ 
ಮೈ ಮಾಟದ ಬಳುಕು
ನಾಗವೇಣಿಯ ಥಳುಕು
ಪ್ರೇಮ ಸೂಸಿಹ ಕಂಗಳು
ರುಚಿಸದೆ ನಿನಗೀ ಉಕ್ಕುವ
ಅನುಪಮ ರೂಪರಾಶಿ?
ನಿಸ್ಸಂದೇಹವಾಗಿ ಹೇಳುವೆ
ನೀನದಾರೋ ಸ್ತ್ರೀ ದ್ವೇಷಿ.
✍ ತ್ರಿನೇತ್ರಜ್.

Wednesday 7 March 2018

*ಬೇಕು ಮೌನ*


    *ಬೇಕು ಮೌನ*



ಇಳಿಹೊತ್ತಲಿ ಏಕಾಂತದಿ
ನಿನ್ನ ಸಂಗಡವಿರಲು
ಬೇಡವಾಯ್ತು ಎನಗೆ
ಹೊತ್ತುಕಳೆವ ಮಾತು||

ಕತ್ತಲಾಗುವವರೆಗೂ
ಕಣ್ಣಲ್ಲಿ ಕಣ್ಣಿಟ್ಟು
ನಿನ್ನೊಳು ಕಾಣುವೆನು
ನನ್ನೆ ನಾ ಮೈಮರೆತು||

ಕಾಲ ಕಟ್ಟಳೆ ದಬ್ಬಿ
ಪ್ರೇಮ ಲತೆಯು ಹಬ್ಬಿ
ಮೌನದಲಿ ಬೆಸೆದಿದೆ
ನಮ್ಮಿಬ್ಬರನು ತಬ್ಬಿ||

ಒಲವು ಅರಳುವ ಹೊತ್ತು
ಅಧರ ಕೇಳಲು ಮುತ್ತು
ಮೌನಕೆ ಶರಣಾಗುವ ಬಾ
ಇನ್ನು ನಮಗೇಕೀ ಮಾತು||

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday 5 March 2018

ಆಸೆ ನಿರಾಸೆ


ಆಸೆ ನಿರಾಸೆ

06/12/2017, 8:49 p.m.*
....... ..... ..... ..... ....
ಎತ್ತರ ಎತ್ತರವೆಂದರೆ
ಅದೇನೊ ಆಸೆ ನನಗೆ.
ಏರಿ ಏರಿ,ಕಂಬ ಸೇತುವೆ
ಮಧ್ಯ ಕುಳಿತೆ, ಸುಸ್ತಾಗೆ.

ಮುತ್ತಿಕೊಂಡಿವೆ ಮೋಡ
ರವಿಯ ಓಟವ ತಡೆದು.
ಓಕುಳಿಯಾಡಲು ಭಾನು
ಬಾನೆಲ್ಲ ರಂಗಾಗಿಹುದು.

ಬಣ್ಣದಾಸೆಗೆ ಹಾರಿಹವು
ಖಗಗಳು ರೆಕ್ಕೆಬಡಿದು.
ಗಗನದತ್ತ ಹಾರುವಾಸೆ
ಮನದಲಿ ಬಂದಿಹುದು.

ಕೈಗಳೆರಡ ಬೀಸುತಲಿ
ಒಮ್ಮೆಲೆ ಪುಟಿನೆಗೆದು,
ಬಳಿಸಾರಿ ರಂಗಿನಾಟವ
ನೋಡುವಾಸೆ ನಿಲ್ಲದು.

ತಾತನ ತಲೆಯಂತಹ
ಬೆಟ್ಟ ಮೂಗುಮುರಿದು,
'ನಿನ್ನ ಕೈಲಿ ಇಷ್ಟೇ ಸಾಧ್ಯ'
ಎಂದಂತೆ ಅನಿಸಿಹುದು.
...... ...... ..... ..... .....
..✍🏼 *ತ್ರಿನೇತ್ರಜ.*
ಶಿವಕುಮಾರ. ಹಿರೇಮಠ.

ದೋಣಿಯಾಟ



 _*ದೋಣಿಯಾಟ*_


ಬೆಳ್ಳಿ ಮೋಡ ಮೆಲ್ಲನೆ ಕರಗಿ
ಮುತ್ತಿನಾ ಮಳೆ ಸುರಿಸಲು
ನೆಲವ ನೆನೆಸಿ ನೆರೆದ ಹನಿಗಳು
ಕೂಡಿ ಕಿರುತೊರೆ ಹರಿಯಲು

ಪುಟ್ಟ ಕಂದನ ಮನದಿ ಹುಟ್ಟಿತು
ಮಳೆಯಲಾಡುವ ಆಸೆಯು
ಅಪ್ಪನ ಕೈಯಲಿ ಮೂಡಿಬಂತು
ಕಾಗದದ ಪುಟ್ಟ ದೋಣಿಯು

ಮರ್ಸಾನ್ ಎಲೆ ಛತ್ರಿ ಹಿಡಿದು
ಮಳೆಯ ತುಂತುರು ನಡುವಲಿ
ಬಯಲ ನೀರಲಿ ದೋಣಿ ಬಿಡೆ
ಹರುಷ ಹರಿಯಿತು ಮೊಗದಲಿ.

ಬಾಲ್ಯದಾ ಸಿಹಿ ನೆನಪು ಮರಳಿ
ಅಪ್ಪನು ಮತ್ತೆ ಮಗುವಾದರು
ಅಮ್ಮ ನೋಡಿ ಕೋಪತಾಳಲು
ಇಬ್ಬರೂ ನಟಿಸುತ ನಕ್ಕರು.

.... ... ... .... .... ....
✍🏼 ತ್ರಿನೇತ್ರಜ್
5-3-18
ಶಿವಕುಮಾರ. ಹಿರೇಮಠ.

Friday 2 March 2018

*ಚುನಾವಣೆ*


[02/03, 5:46 p.m.]
ಕವನ

 
*ಚುನಾವಣೆ*

ಬಂತು ಚುನಾವಣೆ ಮತ್ತೆ
ಸ್ವಾಗತ ಸುಸ್ವಾಗತ
ನಾಸಿಕಕೆ ನವನೀತ ನಾತ
ಇದು ಅವರಿಗೆ ಕರಗತ

ಮನ ಮನೆಗಳ ಒಡೆಯುವ
ಧ್ವಜಗಳ ಹಾರಾಟ
ಜಿದ್ದಾಜಿದ್ದಿಗೆ ಬಲಿಎಷ್ಟೋ
ಅಧಿಕಾರಕ್ಕೆ ಹೊರಾಟ

ಹಳ್ಳಿ ಹಳ್ಳಿಗೂ ಸಾಂಕ್ರಾಮಿಕ
ಬಾಂಧವ್ಯದ ಬಿರುಕು
ಪಾರ್ಟಿಗಳ ಪೈಪೋಟಿಗೆ
ಸಂಬಂಧದಿ ಒಡಕು

ಜನಸೇವಕರಿವರು ಅದ್ಹೇಗೆ
ನಾಯಕರಾಗಿ ನಿಂತರು?
ಜನಬಲಕೆ ಕಣಕ್ಕಿಳಿದರು
ಕೋಟಿಗಳ ಸಿರಿವಂತರು

ಪ್ರಜಾಸೇವೆಗೆಂದೇ ಹಾಕಿ
ನಿಷ್ಠೆಯ ಮುಖವಾಡ
ತೋರುವರು ಗೆದ್ದಮೇಲೆ
ಸ್ವಾಭಿವೃದ್ಧಿಯ ಪವಾಡ

ಪ್ರಜೆಯನ್ನು ಪ್ರಭು ಎನ್ನುವ
ಕಾಲವೂ ಬಂದೀತೆ?
ಮುಗಿಯಲೊಮ್ಮೆ ಚುನಾವಣೆ
ನಮ್ಮ ಬವಣೆ ತಪ್ಪೀತೆ?
.... .... ..... .... ....
✍🏼  ತ್ರಿನೇತ್ರಜ್

ಶಿವಕುಮಾರ. ಹಿರೇಮಠ