Sunday 31 December 2017

*ಬನ್ನಿರೆಲ್ಲ ಶಾಲೆಗೆ* ಕವನ

*ಬನ್ನಿರೆಲ್ಲ ಶಾಲೆಗೆ* 

ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ
ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ|

ವಿದ್ಯೆಯಿಲ್ಲದ ಬಾಳು
 ಹದ್ದಿಗಿಂತಕಡೆ.
ಕಲಿಯೋಣ ಅಕ್ಷರವ
ಶಾಲೆಯೆಡೆಗೆ ನಡೆ.
ಸಾಕಿನ್ನು ಮೋಸಹೋಗೊ
ದಡ್ಡತನದ ಬಾಳು.
ಜ್ಞಾನವಂತರಾದರೆ ಇರದು
ಇಂಥ ಗೋಳು.|೧|

ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ
ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ
ನಲಿಯೋಣ ಕಲಿಯೋಣ
ಎಲ್ಲ ಬನ್ನಿರಿಲ್ಲಿ
ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.
9945915780
ಸಹ ಶಿಕ್ಷಕರು

Friday 22 December 2017

ಕಮರಿತು ಮೊಗ್ಗು


       ವಿಜಯಪುರದ ನಿರ್ಭಯಾಳಿಗೆ ನುಡಿ ನಮನ

       ಕಮರಿತು ಮೊಗ್ಗು

ಮೊಗ್ಗೊಂದು ಅರಳುವ ಮುನ್ನ
ಕಿತ್ತು ದುಷ್ಟರು ಯಮನಿಗಿತ್ತರು.
ಜಗವ ಅರಿಯುವ ಮುನ್ನವೆ
ಕಿತ್ತುತಿಂದು ತೀಟೆಗೆ ಕೊಂದರು.

ನಿಷೇಧಿಸಿದ ಗಾಂಜಾನಶೆಯು
ಗುಮ್ಮಟನಗರದಿ ನುಸುಳಿದೆ.
ರಕ್ಕಸರ ರಕ್ತದಲಿ ಬೆರೆತುಹೋಗಿ
ಕಾಮದಾಸೆಯ ಹುಚ್ಚಾಗಿಸಿದೆ.

ಕಲಿವ ಆಸೆಯ ಹೆಗಲಿಗೇರಿಸಿ
ಬಾಲೆ ಸಖಿಯೊಡನೆ ಸಾಗಿರಲು.
ಬುದ್ದಿಹೀನ ಕ್ರೂರ ಕಂಸರು
ಹೊತ್ತೋಯ್ದು ಹೊಸಕಿದರು.

ತಮ್ಮ ಮನೆಯ ಹೆಣ್ಣಂತೆಯೆ
ಇವಳೂ ಎಂಬುದ ಮರೆತರು.
ಹರಿಣಿಯ ಮೇಲೆ ಹಂದಿಗಳಂತೆ
ಆರ್ಭಟಿಸಿ ಉಸಿರ ಅಳಿಸಿದರು.

ಮಾನವರೇಕಾದರೋ ಇವರು
ನಾಯಿಜನ್ಮವೆಷ್ಟೋ ವಾಸಿ.
ನಗರಮಧ್ಯ ಗಲ್ಲುಗೈದರೂ
ಬದುಕಿ ಬಂದಾಳೆ ಸತ್ತ ಅರಸಿ?

✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.
ಸಹ ಶಿಕ್ಷಕರು
ಅನವಾಲ
ಬಾಗಲಕೋಟೆ.
[22/12, 5:09 p.m.] Shivakumara Hiremath:


Tuesday 5 December 2017

ಕಿರುಗಥೆ
......................
      *_ಪಾಪ ಪ್ರಜ್ಞೆ*_

      ತಡರಾತ್ರಿ ಪಟ್ಟಣದತ್ತ ಬೈಕ್ ಏರಿ ಬರುತ್ತಿದ್ದ ಕಾಮೇಶನಿಗೆ ದಾರಿಯಲ್ಲಿ ಮಹಿಳೆಯರ ಬ್ಯಾಗೊಂದು ಬಿದ್ದಿದ್ದು ಕಾಣಿಸಿತು.
ಯಾರೋ ಬೀಳಿಸಿಕೊಂಡು ಹೋಗಿದ್ದ ಬ್ಯಾಗಲ್ಲಿ ಲಕ್ಷ ಹಣ! ಗಾಡಿ ಬಾಕ್ಸನಲ್ಲಿ ಇಟ್ಟುಕೊಂಡು ಮನೆಗೆ ಬಂದ. ಒಳಗೆ ತರಲು ಅಳುಕಿ ಗಾಡಿಯಲ್ಲೇ ಬ್ಯಾಗ್ ಬಿಟ್ಟು ಒಳ ನಡೆದ.ರಾತ್ರಿ ನಿದ್ರೆ ಬರದೆ ಹೊರಳಾಡುತ್ತಲೇ ಇದ್ದ.
       ಹೆಂಗಸೊಬ್ಬಳು ಹಣ ಕಳೆದುಕೊಂಡದ್ದಕ್ಕೆ ನೊಂದು ಆತ್ಮಹತ್ಯೆಗೆ ರೈಲುಕಂಬಿ ಮಧ್ಯೆ ನಡೆಯುತ್ತಿದ್ದದ್ದ ಕಂಡ ಕಾಮೇಶ ಗಾಡಿ ಇಳಿದು ಅವಳತ್ತ ಓಡತೊಡಗಿದ.ರೈಲು ಬಂದೇಬಿಟ್ಟಿತು.
   " ಏ... ನಿಲ್ಲು.. ನಿಲ್ಲು.." ಕಾಮೇಶ ಕೂಗಿದ. "ನಿಂತಿದ್ದೀನಿ, ಅದೇನ್ ಹೇಳ್ರೀ".. ಧ್ವನಿ ಕೇಳಿ ಕಣ್ಣು  ಬಿಟ್ಟರೆ ಎದುರಿಗೆ ಹೆಂಡತಿ!!
ಬೆಳಕಾಗಿತ್ತು.
        ಬೇಗ ಬೇಗ ಸಿದ್ದನಾಗಿ ಪೋಲಿಸ್ ಠಾಣೆಯತ್ತ ಗಾಡಿ ಓಡಿಸಿದ. ಠಾಣೆ ಬಳಿ ಗಾಡಿ ಇಳಿದು ಬ್ಯಾಗ್ ಜೊತೆ ಒಳಗೆ ಹೋಗುವಾಗ ಎದುರಿಗೆ ಬಂದ ಮಹಿಳೆ " ಅರೇ..ಇದು ನನ್ನ ಬ್ಯಾಗ್, ನಿನ್ನೆ ಕಳೆದುಕೊಂಡಿದ್ದೆ.
ಈಗತಾನೆ ದೂರು ಕೊಟ್ಬಂದೆ" ಎಂದಳು. ಕಾಮೇಶನಿಗೆ ಅವನಿಗರಿವಿಲ್ಲದೆ ನಿಟ್ಟುಸಿರೊಂದು ಹೊರಬಿತ್ತು.
------------------
..‍✒ತ್ರಿನೇತ್ರಜ.
ಸ್ಪೂರ್ತಿ
          -------
ಬಣ್ಣದೊಡನೆ ಕುಂಚ ಆಡಲು
ಬೇಕೊಂದು ಚೆಲುವ ಸ್ಪೂರ್ತಿ.
ಕವಿ ಪ್ರಣಯ ಕವಿತೆಯಾಗಲು
ಬೇಕೊಂದು ಒಲವ ಸ್ಪೂರ್ತಿ.

ಕೊಳದ ತಾವರೆ ಅರಳಿ ನಗಲು
ಉದಯರವಿ ಕಿರಣ ಸ್ಪೂರ್ತಿ.
ಗಿರಿನವಿಲು ನಲಿದು ನರ್ತಿಸಲು
ಮಳೆಯ ಮೇಘವೆ ಸ್ಪೂರ್ತಿ.

ಮೌನದೊಲವ ಮಧುರಗಾನಕೆ
ಕಣ್ಣಂಚಿನ ಕುಡಿನೋಟವೆ ಸ್ಪೂರ್ತಿ.
ದೇಹ ಸೋಕಿ ಮನ ಬೆಸೆಯಲು
ಹೃದಯದ ಮಿಡಿತವೇ ಸ್ಪೂರ್ತಿ.

ಆಸಕ್ತಿ- ಕೌತುಕಗಳೆ ಮನುಜನ
ಜ್ಞಾನಾರ್ಜನೆಯ ಮೂಲಸ್ಪೂರ್ತಿ.
ದೇವನಿಟ್ಟಿಹ ನಿಗೂಢರಹಸ್ಯವೆ
ವಿಜ್ಞಾನ- ಶೊಧನೆಯ ಸ್ಪೂರ್ತಿ.
------------------------
✍.. ತ್ರಿನೇತ್ರಜ.

Monday 4 December 2017

ಲೇಖನ ಸ್ಪರ್ಧೆಗಾಗಿ

     ಕಸಬರಿಗೆಯ ವಿಶ್ವರೂಪ
    ------------------
      ಮನೆ ಎಂದ ಮೇಲೆ ಕಸಬರಿಗೆ ಇರಲೇಬೇಕಲ್ಲವೇ.ಹಾಂ! ಕಸಬರಿಗೆ ಎಂದ ತಕ್ಷಣ ಉದಾಸೀನದಿಂದ ಮುಖತಿರುವಬೇಡಿ. ಅದರ ಬಗ್ಗೆ ತಿಳಿಯಬೇಕಾದುದು ಬಹಳಷ್ಟು ಇದೆ.
          ಪೊರಕೆ, ಪರಕೆ, ಪರ್ಕಿ,ಕೈಸೂಡಿ, ಹಿಡಿಸೂಡಿ..ಇವು ಕಸಬರಿಗೆಯ ಸಮಾನಾರ್ಥಕ ಪದಗಳು.ಸಾವಿರಾರು ವರ್ಷಗಳ ಇತಿಹಾಸವಿರುವ ಇದರ ಬಗ್ಗೆ ಶಾಸ್ತ್ರ ಪುರಾಣ ಅಷ್ಟೆಯಾಕೆ ಬೈಬಲ್ ನಲ್ಲೂ ಉಲ್ಲೇಖ ಇದೆ. ತೆಂಗಿನ ಗರಿ,ಅಡಿಕೆ ಸೋದೆ,ಉದ್ದ ಹುಲ್ಲು,ಈಚಲು ಗರಿ ಇತ್ಯಾದಿ ಬಳಸಿ ಪೊರಕೆ ತಯಾರಿಸುತ್ತಾರೆ.ಒಣಗಿದ  ತೊಗರಿ ಗಿಡಗಳ ಒಗ್ಗೂಡಿಸಿ ಕಟ್ಟಿ ತಯಾರಿಸಿದ್ದಕ್ಕೆ ' ಬರ್ಲು' ಎನ್ನುತ್ತಾರೆ. ಗುಡ್ಡದಲ್ಲಿ ಬೆಳೆಯುವ ಒಂದು ಜಾತಿಯ ಗಿಡಗಳಿಂದ 'ಸಗಣಿ(ಹೆಂಡಿ) ಕಸಬರಿಗೆಯನ್ನು ಉತ್ತರ ಕರ್ನಾಟಕ ರೈತಾಪಿಜನ ಬಳಸುತ್ತಾರೆ.
     18ನೇ ಶತಮಾನದಲ್ಲಿ   ಆಧುನಿಕ ಕಸಬರಿಗೆಗಳನ್ನು ಪರಿಚಯಿಸಿವನು ಮೆಸಾಚುಸೆಟ್ ಪ್ರಾಂತ್ಯದ 'ಲೆವಿ ಡಿಕನ್ಸನ್' ಎಂದು ದಾಖಲೆ ಇದೆ.19ನೇ ಶತಮಾನದಲ್ಲಿ ಅಮೆರಿಕದ ಕ್ರಿಶ್ಚಿಯನ್ ಸಮುದಾಯದವರು 'ಚಪ್ಪಟೆ ಆಕಾರದಲ್ಲಿ ಪೊರಕೆಗಳನ್ನು ಪರಿಚಯಿಸಿದರು.20ನೇ ಶತಮಾನಕ್ಕೆ ಕೃತಕ ನಾರು ಪ್ಲಾಸ್ಟಿಕ್ ನಾರು ಬಳಸಿ ತಂತ್ರದಿಂದ ಪೊರಕೆಗಳು ತಯಾರಿ ಆರಂಭವಾಯಿತು.
 ಭಾರತದ ವಿಚಾರಕ್ಕೆ ಬಂದರೆ ಪೊರಕೆ ಕುರಿತು'ಶುಭಾಶುಭ ಶಾಸ್ತ್ರ' ದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ.ಪೂರಕೆಯನ್ನು ಈಶಾನ್ಯದಲ್ಲಿ ಇಡಬಾರದು, ಗುಡಿಸುವವರು ಭಾಗ ಮೇಲ್ಮಾಡಿ ಇಡಬಾರದು, ಕಾಲಲ್ಲಿ ತುಳಿಯಬಾರದು, ತುಳಿದರೆ ಲಕ್ಷ್ಮಿಸ್ವರೂಪವೆಂದು ನಮಸ್ಕರಿಸಬೇಕು,...
ಮುಂತಾದ ವಿಷಯಗಳನ್ನು ತಿಳಿಸಲಾಗಿದೆ. ಇದನ್ನು ದೃಷ್ಟಿತೆಗೆಯಲು ಕೂಡ ಬಳಸುತ್ತಾರೆ. ಅನಾಚಾರಿಗಳಿಗೆ ಕಸಬರಿಗೆಯಿಂದ ಹೊಡೆದು ಸನ್ಮಾನಿಸುವುದೂ ಉಂಟು.
ಒಟ್ಟಿನಲ್ಲಿ ಪೂರಕೆಯು ಸಾಮಾನ್ಯ ಜನ(ಆಮ್  ಆದ್ಮಿ) ರಿಂದ (ಸ್ವಚ್ಛ) ಭಾರತದ ಎಲ್ಲರಿಗೂ ತನ್ನ ಮಹತ್ವ ತೋರಿದೆ.ಹಾಂ, ಅಂದಹಾಗೆ ಮನೆಯಲ್ಲಿ ಕಸಬರಿಗೆ ಬೇರೆಯವರಿಗೆ ಕಾಣದಂತಿರಿಸಲು ಮರೆಯದಿರಿ.
....   ....   .....   ...... ......
✍ತ್ರಿನೇತ್ರಜ.
 ಶಿವಕುಮಾರ.ಹಿರೇಮಠ.