Friday, 28 September 2018


         *ಕೊಡಗು ನೆನೆದ ಮನ*
         

ಕೋಗಿಲೆ ಹಾರಿ ಹಾಡ ಬಂದಿಹುದು
ಕೊಂಚ ಕೂಡ ಉತ್ಸಾಹ ಕಾಣಲಿಲ್ಲ
ಕೊರಳನಾದಕೆ ಕರೆವ ಆ ಮರವೆಲ್ಲಿ?
ಕೊಡಗಿನ ಆ ಕಳೆ ಈಗ ಉಳಿದಿಲ್ಲ

ವರ್ಷನೇನೊ ಬಂದ ಸಡಗರದಿ
ವನಸಿರಿಗೊ, ಹೊಸಕಳೆ ಕಟ್ಟಲಿಲ್ಲ
ವರುಣನಿಗದೇನೋ ಅತ್ಯುತ್ಸಾಹ
ವಸುಂಧರೆಗೆ ಸಂಯಮ ಬತ್ತಿತಲ್ಲ!

ಸ್ವರ್ಗವೆ ಧರೆಗಿಳಿದಂತಿದ್ದ ಮಲೆಗಳು
ಸ್ವರೂಪವ ಬದಲಾಯಿಸಿವೆಯಲ್ಲ!
ಸ್ವತಂತ್ರ ಬಯಸಿ ಗುಡ್ಡ ಜರುಗಿದವೋ
ಸ್ವಯಂಕೃತ ಕರ್ಮ ಶಾಪವಾಯ್ತಲ್ಲ

ಕಾಫಿ ತೋಟಗಳು ತರೆದಂತಾಗಿವೆ
ಕಾಜಾಣಕೆ ತಂಬೆಲರು ಹಿಡಿಸುತ್ತಿಲ್ಲ
ಕಾಲನಾಟಕೆ ಕಮರಿವೆ ಬದುಕುಗಳು
ಕಾದ ವೀರರೆದೆ ನೋವ ತಾಳಲಿಲ್ಲ

       *ತ್ರಿನೇತ್ರಜ್*

   ಶಿವಕುಮಾರ ಹಿರೇಮಠ.
ಆಗಸ್ಟ್‌. 2018.

No comments:

Post a Comment