ಬಾ ಬಾಲ್ಯವೇ
ಕೇಳಿದ್ದನ್ನು ಕೊಡುವೆ ನಾ
ಬಾ ಮರಳಿ ಬಾಲ್ಯವೇ;
ಮನಸುಮಾಡೊಮ್ಮೆ,ನಿನ್ನ
ಮರಳಿ ಹೊಂದಬಯಸುವೆ.
ಹದವಾಗಿ, ಮುದವಾಗಿ, ಬಲು
ಮೋಜು ಮಜವಾಗಿ ಜೊತೆಗಿದ್ದೆ.
ಹಿತ್ತಲ ಗಿಡವೆಂಬಂತೆ ನಾ ಅಂದು
ನಿನಗೆ ನಿರ್ಲಕ್ಷ್ಯವ ತೋರಿದ್ದೆ.
ಬೆಳೆಯಬೇಕು, ಕಲಿಯಬೇಕು;
ಕಾಣದ ಗುರಿಯ ನಾ ಬೆಂಬತ್ತಿದ್ದೆ.
ಬೇಗ ದೊಡ್ಡವ ನಾನಾಗಬೇಕು
ಎಂದೆಲ್ಲಾ ಆಗ ಹಂಬಲಿಸುತ್ತಿದ್ದೆ.
ಓದಿ ಪದವಿಗಳ ನಾ ಗೆದ್ದು
ಉದ್ಯೋಗ ಹೊಂದಿ ಬೀಗಿದೆ.
ಸಂಸಾರಸಾಗರಕೆ ಆಸೆಬಿದ್ದು
ಮಡದಿ ಮಕ್ಕಳನೂ ಪಡೆದೆ.
ಒತ್ತಡ-ಖಿನ್ನತೆ,ಆತಂಕಾದಿಯಾಗಿ;
ನುಗ್ಗುತಿವೆ ನನ್ನ ಸೋಲಿಸೋಕೆ.
ಎದುರಿಸಿ ಗೆಲ್ಲುವೆ; ಬಳಲಿರುವೆ;
ಜಗದ ಓಟಕೆ, ನಿತ್ಯ ಜಂಜಾಟಕೆ.
ಮಕ್ಕಳ ಬಾಲ್ಯವ ನೋಡುತಲಿ
ಮತ್ತೆ ನಾ ಮಗುವಾಗಬಯಸುವೆ.
ಮನದ ಆಸೆ ತಣಿಸಲಿನ್ನೊಮ್ಮೆ,
ಮರಳಿ ಬರಲಾರೆಯಾ ಬಾಲ್ಯವೆ?
ಶಿವಕುಮಾರ. ಹಿರೇಮಠ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.
No comments:
Post a Comment