Sunday 18 February 2018

ಕಾಯಕಯೋಗಿ


          ಕಾಯಕಯೋಗಿ
            
ಹಚ್ಚಿದ ದೀಪ
ಹೆಚ್ಚೊತ್ತು ಇರದೆ
ತಿಳಿಗಾಳಿಯನೂ
ತಾ ತಾಳದೆ ಆರಿದೆ.

ಕತ್ತಲೇನಿಲ್ಲ ದೀಪದ
ಕೆಳಗೂ, ಸುತ್ತಲೂ;
ಸ್ಪಷ್ಟ ಬೆಳಕಿದೆಯಲ್ಲಾ
ಅತ್ತ-ಇತ್ತ ಎತ್ತೆತ್ತಲೂ!

ಆದರೂ ಹತ್ತುವೆ
ಮತ್ತೆ ಮತ್ತೆ ಹಚ್ಚಲು.
ಅದು ಬೆಳಗಬೇಕೆಂದು,
ಬೆಳಕನಿನ್ನೂ ಹೆಚ್ಚಿಸಲು.

'ಮೆದು-ಮೇಣದಬತ್ತಿ'
ಎಂಬುದದರ ಹೆಸರು.
ತಲೆ ಇರುವ ನನಗೆ
'ದೀಪದಕಡ್ಡಿ'ಎನ್ನುವರು.

ನನ್ನಂಥವರೆ ನನ್ನ
ಹತ್ತಿಸಿ ಉತ್ತೇಜಿಸಿದ್ದು.
ನನ್ನವರ ಕೊಡುಗೆಯೇ
ನನಗೆ ಏಣಿಯಾಗಿದ್ದು.

ದೀಪಗಳ ಹಚ್ಚುವುದೇ
ಸದಾ ನನ್ನ ಕಾಯಕ.
ಜ್ಞಾನದ ಬೆಳಕಿಗಾಗಿಯೇ
ಹುಟ್ಟಿ-ಸಾಯ್ವ ಶಿಕ್ಷಕ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

No comments:

Post a Comment