Wednesday 21 February 2018

*ಮೂಕವೇದನೆ*



      *ಮೂಕವೇದನೆ* 
   
ಎಳಸು ಎಸಳುಗಳುಗಳಿಗೆ
ಚೀತ್ಕಾರ ತರುವ ನೋವು
ಎದೆ ಮೇಲೆ ಕ್ಷಣ ಕ್ಷಣವೂ
ಬಂದೆರಗಿದಂತೆಯೆ ಸಾವು

ದುಷ್ಟ ಹಾಸಿಗೆಯ ನಗು
ಹುಚ್ಚಾಟ ಹೊರಳಾಟ
ನಲುಗುವ ದಿಂಬುಗಳು
ಹೊಸಕಾಟ ಗೋಳಾಟ

ಸುಕೊಮಲ ಕುಸುಮಕೆ
ಏಕಿಂಥ ಈಟಿಯ ತಿವಿತ
ಕುದಿವ ಎದೆಯ ಬಿಸಿಗೆ
ಬೆಂದ ಮೈ ಬೆವರ ನಾತ

ಆಯಾಸದ ನಿದ್ರೆಯಲ್ಲೂ
ಮತ್ತದೇ ಕೆಟ್ಟ ಕೆಟ್ಟ ಕನಸು
ಕನಸೋ ಇಲ್ಲ ನಿಜವೋ
ಅರಿಯದಂತಹ ವಯಸು

ಬಾನಾಡಿಯಾಗಿ ಹಾರುವ
ಕನಸುಗಳೆಲ್ಲ ಸುಟ್ಟವು
ಬೇಡವಾದ ಬವಣೆಗಳ
ಭಾರಕ್ಕೆ ಕಾಲು ಕುಸಿದವು

ಗಿಡುಗನಿಗೆ ಸಿಕ್ಕ ಗುಬ್ಬಚ್ಚಿ
ಒದ್ದಾಡುವಂತಹ ಹಿಡಿತ
ತಿಂಗಳಾದರೂ ನೆತ್ತರು
ಕಾಣದಿರೆ ಭಯ ಆಘಾತ

ಹದಿನಾರರ ಹರಯಕೆ
ಬೇಡವಮ್ಮ ನರಕ ಶಿಕ್ಷೆ
ಕೇಳದೆ ಕೊರಳಿಗೆಬಿದ್ದ
ಭಿಕ್ಷೆ ಮಾಂಗಲ್ಯದ ರಕ್ಷೆ

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

No comments:

Post a Comment