Wednesday 4 July 2018



    *ವಿಷಾದ*
ಕುತೂಹಲ ಭರಿತ
ನಿನ್ನ ನೋಟದ ಹಿಂದೆ
ಸಾವಿರಾಸಕ್ತಿ ಮಗುವೆ
ಜಗವರಿವ ಧಾವಂತ
ನಿನಗಾಗಿದೆ ತಾನೆ?
ಜಗವಿದು ಬಲು ಚಂದ
ಭಗವಂತನಾನಂದ
ಹುಳುಕು ಹೆಚ್ಚಿದ್ದು
ನನ್ನಂತಹ ಹುಚ್ಚು
ಸ್ವಾರ್ಥಿಗಳಿಂದೇನೆ.

ಮಂದಹಾಸ ಸೂಸುವ
ಹಾಲ್ಗೆನ್ನೆಗಳ ಹಿಂದೆ
ಬೊಚ್ಚುಬಾಯಿಯಲಿ
ಸಹಜಾತಿಸಹಜವಾದ
ಮುಗ್ದನಗುವರಳಿದೆ.
ಬಾಡದಿರಲಿ ನಗೆಹೂವು
ಇದುವೆ ನನ್ನಾಸೆ ಕಂದ
ಜಗದೊಳ ನಗುವಲಿ
ಮೋಸ,ಕಪಟ,ಅಪಹಾಸ್ಯ
ಕೃತಕತೆಯು ತುಂಬಿದೆ
_______      _______
       ತ್ರಿನೇತ್ರಜ್.


*ಆಪತ್ತಿನ ಕರೆ ಗಂಟೆ*
(ವಿಶ್ವ ಜನಸಂಖ್ಯೆ
 ದಿನದ ಪ್ರಯುಕ್ತ)
----------------

ಕಳೆದ ಶತಮಾನದ
ಎಂಬತ್ತೇಳರಲ್ಲಿ
ಪಂಚ ಬಿಲಿಯನ್
ತಲುಪಿತು ವಿಶ್ವದ
ಮನುಕುಲ ಸಂಖ್ಯೆ

ಏಳುವರೆ ಬಿಲಿಯನ್
ದಾಟಿಹೆವು ವೇಗದಲಿ
ವಿಶ್ವ ವಿನಾಶ ತಡೆಗೆ
ಎಚ್ಚರದಿ ಹಾಕಬೇಕಿದೆ
ಜನಸಂಖ್ಯೆಗೆ ಅಂಕೆ

ಚೀನಾ ರಾಷ್ಟ್ರವು
ಗಜಗಾತ್ರ ದೇಶ
ಪ್ರಥಮವಾಗಿದೆ
ಜನಸಂಖ್ಯೆಗಿದು
ಮುಂಚೂಣಿಯಲ್ಲಿ

ನಮ್ಮ ಭಾರತವೇನು
ಹಿಂದೆಬಿದ್ದಿಲ್ಲ ಬಿಡಿ
ಕ್ಷೇತ್ರ ಕಮ್ಮಿಯಾದ್ರೂ
ಜನಸಂಖ್ಯೆಯಲ್ಲಿದೆ
ದ್ವಿತೀಯ ಸ್ಥಾನದಲ್ಲಿ

ಕಾಡು ಕಿರಿದಾಗಿ
ಒಡಲು ಬರಿದಾಗಿ
ಮಾಲಿನ್ಯ ಹೆಚ್ಚಾಗಿ
ಬಿಸಿಯಿಂದ ಬೆಚ್ಚಿಹಳು
ನೊಂದ  ವಸುಂಧರೆ

ಯೊಚಿಸದಿದ್ದರೆ
ಮುಂದೆ ಧರೆಗೆ
ಗಂಡಾತರ ತಪ್ಪದು
ಬೇಡವೇ ಬೇಡಿದಕೆ
ಎಳ್ಳಷ್ಟೂ ಶಂಖೆ
____________
  # ಶಿವಕುಮಾರ. ಹಿರೇಮಠ.
 (ತ್ರಿನೇತ್ರಜ್)

Sunday 1 July 2018



    
*ಅತ್ತೆ ಅವತಾರಗಳು*
ಅಯ್ಯೊ ಅತ್ತೆ! ನನ್ನತ್ತೆ
ನಿನ್ನವತಾರಕೆ ನಾ ಬೇಸತ್ತೆ.

ಐದನೇ ವಯಸಲಿ
ಅಂದು ಕೇಳಿದ್ದೆ
ಅತ್ತೆ ಅತ್ತೆ ಆಸೆ ಆಗ್ತಿದೆ
ಲಡ್ಡು ಕೊಡು ಅತ್ತೆ.
ಕೆನ್ನೆ ಊದಿಸಿ ಗದರಿದಳತ್ತೆ
ಲಡ್ಡುನು ಇಲ್ಲ ಪಡ್ಡುನು ಇಲ್ಲ
ತಂಗಳನ್ನವನೆ ತಿಂದು
ತೊಲಗಲೋ ಕತ್ತೆ.

ಹತ್ತನೆ ವಯಸಲಿ
ಮೆತ್ತಗೆ ನಾ ಕೇಳಿದ್ದೆ
ಅತ್ತೆ ಅತ್ತೆ ಪುಸ್ತಕ ಬೇಕಿದೆ
ಹಣವನು ಕೊಡು ಅತ್ತೆ.
ಕಣ್ಣು ಕೆಕ್ಕರಿಸಿ ನುಡಿದಳತ್ತೆ
ಹಣಾನು ಇಲ್ಲ ಹೆಣಾನೂ ಇಲ್ಲ
ಇನ್ನೊಂದ್ಸಾರಿ ದುಡ್ಡು ಕೇಳಿ
ಬಂದರೆ ನೀ ಸತ್ತೆ

ಹದಿನೈದನೆ ವಯಸಲಿ
ದೈನದಿಂದ ಕೇಳಿದ್ದೆ
ಅತ್ತೆ ಅತ್ತೆ ಶಾಲೆ ದೂರ
ಸೈಕಲ್ ಕೊಡು ಅತ್ತೆ.
ಅಬ್ಬರಿಸಿ ಇಂತೆಂದಳತ್ತೆ
ಸೈಕಲ್ಲೂ ಇಲ್ಲ ಗುಂಡ್ಕಲ್ಲು ಇಲ್ಲ
ಸುಮ್ಮನೆ ನಮ್ಮನೆ ಹತ್ರಕೆ
ಸುಳಿಬೇಡವೋ ಮತ್ತೆ

ಇಪ್ಪತ್ತನೆ ವಯಸಲಿ
ಅಳಕುತ್ತ ಕೇಳಿದೆ
ಅತ್ತೆ ಅತ್ತೆ ಸುತ್ತಾಡಲೆಂದು
ಬೈಕ್‌ನು ಕೊಡಿಸತ್ತೆ
ಹುಬ್ಬೇರಿಸಿ ಹೇಳಿದಳತ್ತೆ
ಬೈಕೂ ಇಲ್ಲ ನೀ ಲೈಕೂ ಇಲ್ಲ
ಶೋಕಿಗಾಗಿ ಕಾಸುಗಳೇನು
ಮರದಿಂದುದುರುತ್ತೇ?

ಇಪ್ಪತ್ತೈದನೆ ವಯಸಲಿ
ಸುಮ್ಮನೆ ಕೇಳಿದೆ
ಅತ್ತೆ ಅತ್ತೆ ಮದುವೆಗಾಗಿ
ಹೆಣ್ಣೊಂದ ನೋಡತ್ತೆ.
ಮುಖವರಳಿಸಿಬಿಟ್ಟಳತ್ತೆ
ಹೆಣ್ಣೂ ಇದೆ ಹೊನ್ನೂ ಇದೆ
ನಿನಗಾಗಿ ಕೊಡಲೆಂದಲೆ
ನಾನು ಮಗಳ ಹೆತ್ತೆ.

ತ್ರಿನೇತ್ರಜ್.