Showing posts with label ಕವನ. Show all posts
Showing posts with label ಕವನ. Show all posts

Tuesday, 19 February 2019

ಹೊಂಚು

        ಹೊಂಚು
ಬಾನಾಡಿಯ ಸಾಂಗತ್ಯ ಬಯಸೆ
ಬಾನ ಮುಟ್ಟಬಹುದೇನು ಕೂರ್ಮವು
ಎತ್ತರೆತ್ತರಕೇರಬಯಸುವ ಹುಚ್ಚು!
ತಪ್ಪೀತೆ ಮರಳಿ ಮಣ್ಣಿಗಿಳಿವ ಕರ್ಮವು

ಕಾದಿವೆ ಅದೋ,ರಣಹದ್ದುಗಳು
ಹಸಿ ಮಾಂಸ ಬಿಸಿ ನೆತ್ತರಿನ ಊಟಕೆ
ಬರಿ ಮೂಳೆಗಳಾಗಿ ಬಿತ್ತು ಬದುಕು
ಬಲಿಯಾದವರದೆಷ್ಟೋ ಈ ಕೂಟಕೆ

ಮುಖದಲ್ಲೇನು ಕಂಡೀತು ಕ್ರೌರ್ಯ
ಸಣ್ಣ ಕಣ್ಣುಗಳೊಡನೊಂದು ಚುಂಚು
ಬಳ್ಳಿಯಂತೆ ಬಳಕುವ ಕೊರಳಿನಡಿ
ಒರಟಾದ ನಖಗಳು ಹಾಕಿವೆ ಹೊಂಚು

ಅಡವಿ ನ್ಯಾಯದ ಕೊಡೆಯಡಿಯಲ್ಲಿ
ಅಸಹ್ಯ ಆಸೆಗಂಟಿನಿಂತ ಖೂಳರ ದಂಡು
ಬದುಕ ದಾರಿ ಅರಸಿ ಬರುವ ಮುಗುದ
ಜೀವಗಳ ಬಲಿಗೆ ಕುಳಿತಿದೆ ಕಾದುಕೊಂಡು

  *ತ್ರಿನೇತ್ರಜ್*

Wednesday, 17 October 2018

*ಸ್ವಾಮಿ ಅಯ್ಯಪ್ಪ*
   
ಶಬರಿಮಲೆಯ ಸ್ವಾಮಿಯೆ
ಶರಣಂ ಅಯ್ಯಪ್ಪ
ಹೆಣ್ಣ ಕಂಡರೆ ನಿನಗಾಗದಂತೆ
ಇದು ನಿಜವೇನಪ್ಪ?

ಹೆಣ್ಣಿಂದ ಕಳೆಗುಂದದೆಂದೂ
ನಿನ್ನ ಅಮರ ಶಕ್ತಿ
ಹೆಣ್ಣು ತಾನೇ ಸೃಷ್ಟಿಮೂಲ
ಅವಳೇ ಆದಿಶಕ್ತಿ

ತಾಯಿಯಿಲ್ಲದೆಯೆ ಹುಟ್ಟಿಹರೆ
ನಿನ್ನ ಪ್ರೀಯ ಭಕ್ತರು?
ಜಗದ ಧರ್ಮ ಪ್ರಕೃತಿ ಪುರುಷ
ಎಂಬುದೇಕೆ ಮರೆತರು!

ನ್ಯಾಯ ಧರ್ಮ ಮೀರಿನಿಂತ
ಜನ ತಗೆದಿಹರು ತಂಟೆ
ನಿನ್ನ ನಂಬಿ ಬರುವ ಭಕ್ತರಲ್ಲಿ
ಲಿಂಗಭೇದ ಉಂಟೆ!

ನಿನ್ನ ಭಕ್ತರಿಗೆ ಒಂದು ಸ್ವಲ್ಪ
ಸಹನೆ ಬುದ್ಧಿ ಕೊಡಪ್ಪ
ಸ್ತ್ರೀಯರಿಗೂ ದರ್ಶನ ನೀಡಿ
ಪುಣ್ಯವ ಕಟ್ಟಿಕೊಳ್ಳಪ್ಪ

ಸ್ವಾಮಿ ಶರಣಂ ಅಯ್ಯಪ್ಪ ಶರಣಂ


*ತ್ರಿನೇತ್ರಜ್*

Friday, 28 September 2018


         *ಕೊಡಗು ನೆನೆದ ಮನ*
         

ಕೋಗಿಲೆ ಹಾರಿ ಹಾಡ ಬಂದಿಹುದು
ಕೊಂಚ ಕೂಡ ಉತ್ಸಾಹ ಕಾಣಲಿಲ್ಲ
ಕೊರಳನಾದಕೆ ಕರೆವ ಆ ಮರವೆಲ್ಲಿ?
ಕೊಡಗಿನ ಆ ಕಳೆ ಈಗ ಉಳಿದಿಲ್ಲ

ವರ್ಷನೇನೊ ಬಂದ ಸಡಗರದಿ
ವನಸಿರಿಗೊ, ಹೊಸಕಳೆ ಕಟ್ಟಲಿಲ್ಲ
ವರುಣನಿಗದೇನೋ ಅತ್ಯುತ್ಸಾಹ
ವಸುಂಧರೆಗೆ ಸಂಯಮ ಬತ್ತಿತಲ್ಲ!

ಸ್ವರ್ಗವೆ ಧರೆಗಿಳಿದಂತಿದ್ದ ಮಲೆಗಳು
ಸ್ವರೂಪವ ಬದಲಾಯಿಸಿವೆಯಲ್ಲ!
ಸ್ವತಂತ್ರ ಬಯಸಿ ಗುಡ್ಡ ಜರುಗಿದವೋ
ಸ್ವಯಂಕೃತ ಕರ್ಮ ಶಾಪವಾಯ್ತಲ್ಲ

ಕಾಫಿ ತೋಟಗಳು ತರೆದಂತಾಗಿವೆ
ಕಾಜಾಣಕೆ ತಂಬೆಲರು ಹಿಡಿಸುತ್ತಿಲ್ಲ
ಕಾಲನಾಟಕೆ ಕಮರಿವೆ ಬದುಕುಗಳು
ಕಾದ ವೀರರೆದೆ ನೋವ ತಾಳಲಿಲ್ಲ

       *ತ್ರಿನೇತ್ರಜ್*

   ಶಿವಕುಮಾರ ಹಿರೇಮಠ.
ಆಗಸ್ಟ್‌. 2018.

Sunday, 1 July 2018



    
*ಅತ್ತೆ ಅವತಾರಗಳು*
ಅಯ್ಯೊ ಅತ್ತೆ! ನನ್ನತ್ತೆ
ನಿನ್ನವತಾರಕೆ ನಾ ಬೇಸತ್ತೆ.

ಐದನೇ ವಯಸಲಿ
ಅಂದು ಕೇಳಿದ್ದೆ
ಅತ್ತೆ ಅತ್ತೆ ಆಸೆ ಆಗ್ತಿದೆ
ಲಡ್ಡು ಕೊಡು ಅತ್ತೆ.
ಕೆನ್ನೆ ಊದಿಸಿ ಗದರಿದಳತ್ತೆ
ಲಡ್ಡುನು ಇಲ್ಲ ಪಡ್ಡುನು ಇಲ್ಲ
ತಂಗಳನ್ನವನೆ ತಿಂದು
ತೊಲಗಲೋ ಕತ್ತೆ.

ಹತ್ತನೆ ವಯಸಲಿ
ಮೆತ್ತಗೆ ನಾ ಕೇಳಿದ್ದೆ
ಅತ್ತೆ ಅತ್ತೆ ಪುಸ್ತಕ ಬೇಕಿದೆ
ಹಣವನು ಕೊಡು ಅತ್ತೆ.
ಕಣ್ಣು ಕೆಕ್ಕರಿಸಿ ನುಡಿದಳತ್ತೆ
ಹಣಾನು ಇಲ್ಲ ಹೆಣಾನೂ ಇಲ್ಲ
ಇನ್ನೊಂದ್ಸಾರಿ ದುಡ್ಡು ಕೇಳಿ
ಬಂದರೆ ನೀ ಸತ್ತೆ

ಹದಿನೈದನೆ ವಯಸಲಿ
ದೈನದಿಂದ ಕೇಳಿದ್ದೆ
ಅತ್ತೆ ಅತ್ತೆ ಶಾಲೆ ದೂರ
ಸೈಕಲ್ ಕೊಡು ಅತ್ತೆ.
ಅಬ್ಬರಿಸಿ ಇಂತೆಂದಳತ್ತೆ
ಸೈಕಲ್ಲೂ ಇಲ್ಲ ಗುಂಡ್ಕಲ್ಲು ಇಲ್ಲ
ಸುಮ್ಮನೆ ನಮ್ಮನೆ ಹತ್ರಕೆ
ಸುಳಿಬೇಡವೋ ಮತ್ತೆ

ಇಪ್ಪತ್ತನೆ ವಯಸಲಿ
ಅಳಕುತ್ತ ಕೇಳಿದೆ
ಅತ್ತೆ ಅತ್ತೆ ಸುತ್ತಾಡಲೆಂದು
ಬೈಕ್‌ನು ಕೊಡಿಸತ್ತೆ
ಹುಬ್ಬೇರಿಸಿ ಹೇಳಿದಳತ್ತೆ
ಬೈಕೂ ಇಲ್ಲ ನೀ ಲೈಕೂ ಇಲ್ಲ
ಶೋಕಿಗಾಗಿ ಕಾಸುಗಳೇನು
ಮರದಿಂದುದುರುತ್ತೇ?

ಇಪ್ಪತ್ತೈದನೆ ವಯಸಲಿ
ಸುಮ್ಮನೆ ಕೇಳಿದೆ
ಅತ್ತೆ ಅತ್ತೆ ಮದುವೆಗಾಗಿ
ಹೆಣ್ಣೊಂದ ನೋಡತ್ತೆ.
ಮುಖವರಳಿಸಿಬಿಟ್ಟಳತ್ತೆ
ಹೆಣ್ಣೂ ಇದೆ ಹೊನ್ನೂ ಇದೆ
ನಿನಗಾಗಿ ಕೊಡಲೆಂದಲೆ
ನಾನು ಮಗಳ ಹೆತ್ತೆ.

ತ್ರಿನೇತ್ರಜ್.

Wednesday, 27 June 2018

           *ಪ್ರಳಯ ಮುನ್ನ*
         
ಎನೀ ವಿಪ್ಲವ ತಲ್ಲಣಿಸಿದೆ ಭಾವ
ಅರವಿಗೆಟುಕದ ಘೋರ ಸಂಭವ||
ಧರಣಿ ಎದೆಯೊಳೆನೋ ಕಂಪನ
ಪ್ರಳಯಾಗಮನ ಮುನ್ಸೂಚನ ||ಪ||

ಕತ್ತಲ ರಾತ್ರಿಯ ಬಾಗಿದ ಕತ್ತು
ಬೆವರುತ ಬೆಚ್ಚುತ ಸಾಗುತಿದೆ
ಚಂದ್ರನಿಲ್ಲದ ಕರಿಬಾನಿನಲಿ
ಧೂಮಕೇತುವು ಕಾಣಿಸಿದೆ
ಸಂಚಲನ ಮರೆತ ಸಾಗರ
ಮೌನದ ಮನೆಯ ಸೇರಿದೆ ||೧||

ಕಡಿದು ಸುಟ್ಟ ಮರದ ಆತ್ಮಗಳು
ಕಣ್ಣರಳಿಸಿ ಕೂತಿವೆ ದಿಟ್ಟಿಸಿ
ಕೊಂದ ಬೆಂದ ಮೂಕಜೀವಿಗಳ
ಪ್ರೇತಗಳು ಕಾಯ್ದಿವೆ ಕಾತರಿಸಿ
ಬಂದಿತೆ ಅಂತ್ಯವು ಮಾನವಾ?
ತಂದುಕೊಂಡೆಯಾ ಹಂಬಲಿಸಿ.||೨||
        -------------
          *ತ್ರಿನೇತ್ರಜ*
(ಶಿವಕುಮಾರ ಹಿರೇಮಠ)



*ಯೋಗಾಭ್ಯಾಸ*

(೨೧-೬-೧೮. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ)

ಬೆಳಗೆದ್ದು ದಿನವೂ
ಸೂರ್ಯೋದಯಕೆ
ಮಾಡುವ ಬನ್ನಿ ಯೋಗ
ಗಡಿಬಿಡಿ ಬದುಕಲಿ
ಸ್ವಾಸ್ಥ್ಯಕೆ ಮಾಡುವ
ಅಲ್ಪ ಸಮಯದ ತ್ಯಾಗ

ಸ್ವಚ್ಛ ಬಯಲಿನಲಿ
ನಿರ್ಮಲ ಭಾವದಿ
ಜೋಡಿಸಿ ನಮ್ಮ ಕರ
ಚಿಂತೆ ಮರೆಯುವ
ಏಕಚಿತ್ತದಿ ಮಾಡುತ
ಸೂರ್ಯ ನಮಸ್ಕಾರ

ಒತ್ತಡ ತೊರೆಯಲು
ಯೋಗ ಮಾಡುವ
ಅಂತಃಶಕ್ತಿ ವೃದ್ದಿಗೆ
ಚೈತನ್ಯಶೀಲ ಅಂಗ
ಹೊಂದುತ ಹೇಳುವ
ವಿದಾಯ ಮದ್ದಿಗೆ
--- ---- --- --- ---
ತ್ರಿನೇತ್ರಜ್
( ಶಿವಕುಮಾರ. ಹಿರೇಮಠ)

     ಕನ್ನಡ ಜ್ಯೋತಿ

ಕನ್ನಡದ ಜ್ಯೋತಿಯ ಬೆಳಗಿಸುವ
ಕರುನಾಡು ಹಣತೆ
ಅಭಿಮಾನ ತೈಲ
ಸಾಹಿತ್ಯ ಬತ್ತಿಯ ಅದ್ದಿ

ಗಡಿ ಗುಡಿಗಳಲ್ಲಿ ನೆರೆಭಾಷೆ ನುಗ್ಗಿ
ಕನ್ನಡಕೆ ಕಂಟಕವ ತರಲು ಬಿಡೆವು
ನಮ್ಮ ನೆಲ ನಮ್ಮ ಜಲ ಆಪೋಷಿಸೊ
ಪರಭಾಷೆ ಕಳೆಯನ್ನು ಕಿತ್ತೊಗೆವೆವು
ಭುವನೇಶ್ವರಿಯ ಭವ್ಯದೇಗುಲವ
ಜನ ಮನಗಳಲ್ಲಿ ನಿರ್ಮಿಸುವೆವು
ನುಡಿಯನ್ನು ಬಳಸಿ ಬರಹವನು ಕಲಿಸಿ
ಮಗು ಮಗುವಿಗಕ್ಷರವ ತುಂಬುವೆವು
ಗಣಿಪುರಗಳಾದರೂ ಬೆಳಗಾವೇ ಆದರೂ
ಪರಭಾಷೆಯಾ ಗರವ ಓಡಿಸುತ
ಕನ್ನಡದ ಜ್ಯೋತಿಯ ಬೆಳಗಿಸುವ

ನಾಡ ಕೈಂಕರ್ಯ ಆದ್ಯತೆಯ ಕಾರ್ಯ
ಕಂಕಣವ ಕಟ್ಟಿ ನಾವ್ ಮುನ್ನಡೆವೆವು
ಮಲೆನಾಡೆ ಇರಲಿ ತುಳುನಾಡೆ ಇರಲಿ
ಬಯಲು ಸೀಮೆ ಇರಲಿ ಕೂಡಿರುವೆವು
ತಾಯ ಕಿರೀಟದಿ ಜ್ಞಾನ ಪೀಠದೆಂಟು
ರತ್ನಗಳು ಹೊಳೆದು ಮಿಂಚುತಿಹವು
ಕಬ್ಬಿಗರ ಒಡಲಿದು ಕಾವ್ಯದ ಕಡಲಿದು
ನುಡಿಯೆ ಐಸಿರಿಎಮಗೆ ಅನವರತ
ಸಾಹಿತ್ಯ ಕೃಷಿಗೈದು ಅಕ್ಷರಗಳ ಬಿತ್ತುತ
ಜಗದೊಳಗೆ ಕನ್ನಡವ ಬೆಳಗುವ
ಕನ್ನಡದ ಜ್ಯೋತಿಯ ಬೆಳಗಿಸುವ

ಎದೆಯೊಳಗೆ ಉಲಿವ ಹೃದಯಕೂಡ
ಕನ್ನಡದ ನುಡಿಯನ್ನೆ ಜಪಿಸುತಿಹುದು
ಧಮನಿ ಧಮನಿಗಳಲ್ಲಿ ಹರಿವ ರಕ್ತ
ನಲ್ನುಡಿಯ ಮಿಂಚನ್ನ ಹರಿಸಿರುವುದು
ಜನ್ನುಡಿ ಕನ್ನಡ ರನ್ನುಡಿ ಕನ್ನಡ
ಪಂಪನುಡಿದಾಡಿದ ಪೊನ್ನುಡಿಯಿದು
ಕುಮಾರವ್ಯಾಸ, ಕವಿ ಕನಕದಾಸ
ಬಸವಣ್ಣ ಮಹಾದೇವೀ ವಚನವಿದು
ಹಿಂದೆಯೂ ಕನ್ನಡ ಇಂದಿಗೂ ಜನ್ನಡ
ಎಂದೆಂದೂ ಕನ್ನಡವ ಮೆರೆಸುವ
ಕನ್ನಡದ ಜ್ಯೋತಿಯ ಬೆಳಗಿಸುವ


ತ್ರಿನೇತ್ರಜ

(ಶಿವಕುಮಾರ ಹಿರೇಮಠ)
      ಎಚ್ಚೆತ್ತುಕೋ ಮತದಾರ

ಒಬ್ಬಟ್ಟಿನಲ್ಲಿಹುದು ಸಿಹಿಯು ಕಾಣ
ಒಗ್ಗಟ್ಟಿನಲ್ಲೇ ಇಹುದು ಬಲವೊ ಜಾಣ
ಒಂದಾಗದಿರೆ ದೇಶದೇಳ್ಗೆಯಾದೀತೆ?
ಮತ ಮಾರಿದರೆ ಮಾನ ಉಳಿದೀತೆ?

ಮತಕೊಳ್ಳುವವನೇನು ತನ್ನ
ಮನೆಯಲ್ಲಿ ನೋಟುಗಳ
ಜನಹಿತಕೆ ಅಚ್ಚೊತ್ತಿ ತರುವನೇ?
ಹಣವನ್ನು ಚೆಲ್ಲುತ್ತ ತಾ ಗೆದ್ದು
ಸೌಧವನು ಸೇರಿ ಹೂಡಿದುದಕ್ಕೆ
ಚಕ್ರಬಡ್ಡಿಕೂಡಿ ಮರಳಿ ಪಡೆಯನೇ?

ಜಾತಿ ಕಿತ್ತೊಗೆವ ನೀತಿಯ ಹೇಳುತ್ತ
ಜಾತಿ ನೋಡಿ ನೀ ಮತವ ಹಾಕಿದರೆ ಜಾತಿಗಳು ದೇಶದಿಂದಳಿವವೇನೋ?
ಜಾತಿ ಹೆಂಡವ ಕುಡಿದ ಕೋತಿ ತಾ
ಜನರನ್ನು ಜಾತಿ ಹೆಸರಲೆ ಒಡೆದು
ಬಳಗದ ಮರದಿ ಜೋತಾಡದೇನೊ?

ಸರಕಾರವೆಂಬುದು ದರ್ಪವ ತೋರಿ
ನಮ್ಮನ್ನಾಳುವ ದರ್ಬಾರಿಕೆಯಲ್ಲ,
ಮತದಾರರ ಹಿತ ಸೇವೆಗೆಂತಾಗಲಿ.
ಸೇವೆಗೈಯದೆ ತಾನು ಸ್ವಾರ್ಥವನೆ
ಸಾಧಿಸುವ ನಾಯಕನಿಗೆ ಮತದಾರ
ಕೊರಳ್ಪಟ್ಟಿ ಹಿಡಿದು ಕೇಳುವಂತಾಗಲಿ.

      ತ್ರಿನೇತ್ರಜ

( ಶಿವಕುಮಾರ ಹಿರೇಮಠ)
     



Sunday, 15 April 2018

ಮನಃಶಾಂತಿ ಅರಸಿ

[03/04, 10:49 p.m.]

     *ಮನಃಶಾಂತಿ ಅರಸಿ*
ಸದ್ದು ಗದ್ದಲದ ಜಗದಲ್ಲಿ
ಏಕೋ ನೆಮ್ಮದಿ ಕಾಣೆ
ಎಲ್ಲೆಡೆ ಎಲ್ಲರ ಪೂತ್ಕಾರ
ಚೀತ್ಕಾರ ಹಾಹಾಕಾರ
ಕೆಲವೆಡೆ ಕೆಲವರಿಗೆ
ಜೈಕಾರ ,ಮಣ ಹಾರ:
ಎದುರಾಡಿ ವಿರೋಧವ
ಕಟ್ಟಿಕೊಂಡರೆ ದಿಕ್ಕಾರ!
ಇಲ್ಲ ,ಇಲ್ಲೆಲ್ಲೂ ಸಿಗುತ್ತಿಲ್ಲ
ಸಹನೆಯ ಮಂದಾರ
ಹಿಡಿಯಷ್ಟು ಹೃದಯಕ್ಕೆ
ತಂಪೆರೆವ ಮಮಕಾರ
ಮಾನವತೆಯ ಮರೆತಲ್ಲಿ
ಸ್ವಾರ್ಥದ ಸಾಕ್ಷಾತ್ಕಾರ
ಹೊರಟೇ ಹೋಯಿತು
ಆತ್ಮ ವು ಕೂಗಿ ದಿಕ್ಕಾರ
ಮನಶಾಂತಿಯ ಹುಡುಕಿ
ಈ ಜಗದಿಂದಲೇ ದೂರ
✍ ತ್ರಿನೇತ್ರಜ
ಶಿವಕುಮಾರ. ಹಿರೇಮಠ.
,,....,
[04/04, 10:05 a.m.] 
ಕೂರ್ಮಪುತ್ರಿ
ಟೈಟಾನಿಕ್
ಹಿರೋಯಿನ್?
ಅಲ್ಲ, ಕೈಟಾಗಿ
ಕ್ಲೌಡಿನ ಮಡಿಲ
ಸೇರಬಯಸುವ
ಕೂರ್ಮಪುತ್ರಿ
ಟಾರ್ಟಾಯಿನ್.
ತ್ರಿನೇತ್ರಜ

Sunday, 1 April 2018

ಸಿದ್ದಗಂಗಾ ಕಣ್ಮಣಿ




ಸಿದ್ದಗಂಗಾ  ಡಾ.ಶಿವಕುಮಾರ ಸ್ವಾಮಿಜಿಯವರ 111ನೇ ಜನ್ಮದಿನಾಚರಣೆ ನಿಮಿತ್ಯ

*ಸಿದ್ದಗಂಗಾ ಕಣ್ಮಣಿ*

ಗಂಧದ ಗುಡಿಯಲಿ
ನೆಲೆಸಿಹ ಶರಣರು
ಸಿದ್ದಗಂಗಾ ಶ್ರೀ ಗಳು
ನಡೆದಾಡುವ ದೇವರು ||ಪ||

ತ್ರಿವಿಧ ದಾಸೋಹ
ನಡೆಸುತ ಸಾಗಿಹ
ಕನ್ನಡ ನಾಡಿನ ಹಿರಿಮೆಯೆ
ಧರ್ಮ ಸಾರುವ
ಶಿಕ್ಷಣ ಬೀರುವ
ಸಿದ್ದಗಂಗೆಯ ಕಣ್ಮಣಿಯೆ
ಭಕ್ತರ ಪಾಲಿಗೆ
ಕರುಣಾಂಬುದಿಯೆ ||೧||

ಕಾಯಕದಲೆ
ಕೈಲಾಸವೆಂಬುದು
ಸಿದ್ದಗಂಗೆಯಲಿ ಕಾಣುವುದು
ಶತಾಯುಷಿಗಳ
ಪಾದ ಸ್ಪರ್ಷವೇ
ಧನ್ಯ ಭಾವವ ತುಂಬುವುದು
ಅಹಂ ಭಾವವು
ಕಳೆಯುವುದು ||೨||

ಕರ್ನಾಟಕ ರತ್ನ
ಪದ್ಮಭೂಷಣ
ಶ್ರೀ ಗಳ ಮುಕುಟ ಮಣಿಗಳು
ಭಾರತ ದೇಶದ
ಅನುಪಮ ರತುನ
ಶ್ರೀ ಶಿವಕುಮಾರ ಗುರುಗಳು
ತಮಗೆ ಸಾವಿರದ
ನಮನಗಳು||೩||

✍🏼 ತ್ರಿನೇತ್ರಜ್.

ಶ್ರೀ. ಶಿವಕುಮಾರ. ಹಿರೇಮಠ.

*ಎಲ್ಲರಂತೆ ನಾನು*



 *ಎಲ್ಲರಂತೆ ನಾನು*

ಎಲ್ಲರೊಳೊಂದಾಗುವುದು
ಈ ಜಗದ ಧರ್ಮ
ಧರ್ಮದಂತೆ ನಡೆಯೋದೆ
ಇಲ್ಲಿ ನನ್ನ ಕರ್ಮ
ನಿಸ್ವಾರ್ಥ ಜಗದೊಳು ಸ್ವಾರ್ಥಿಯಾಗಲಾರೆ
ನಿಷ್ಕಪಟ ಜನರ ಮಧ್ಯೆ
ಕಪಟಿ ನಾನಾಗಲಾರೆ ||ಪ||

ತೇಯ್ದಷ್ಟು ಕಂಪನು
ಬೀರುವುದು ಗಂಧ
ದೇವನ ನೊಸಲನು
ಸೇರೇ ಇನ್ನೂ ಚಂದ
ಗಂಧ ನಿರ್ಜೀವಿ ತಾನು
ಮನುಜ ಜೀವಿ ನಾನು ||೧||

ಪರರಿತ್ತ ನಾತಹೊತ್ತು
ಸಾಗುತಿಹುದು ಗಾಳಿ
ಬೀಸದಿರೆ ತಾ ಜಗಕೆಲ್ಲ
ತಪ್ಪಲಾರದು ಕವಳಿ
ನೋವು ನಲಿವು ಗಾಳಿಗಿಲ್ಲ
ಮನುಜ ನಾ ಗಾಳಿಯಲ್ಲ||೨||

✍🏼 ತ್ರಿನೇತ್ರಜ್

ಶಿವಕುಮಾರ ಹಿರೇಮಠ

Sunday, 18 March 2018

ಬಾರಯ್ಯಾ ಯುಗಾದಿ ಬಾ

ಕವನ
*ಬಾಯ್ಯಾ ಯುಗಾದಿ ಬಾ*




ನೆನಪಾಯಿತೇನು ಮತ್ತೆ
ಬುವಿಯತ್ತಣದ ಹಾದಿ
ಇಳೆಗೆ ಹಸಿರ ತುಂಬಲು
ಬಂದೆಯಾ ಯುಗಾದಿ

ಗಂಧ ಪೂಸೆ ಬಂದೆಯಾ
ಮಾವು ತೋಪಿನ ತುಂಬ?
ಮಕರಂದವ ಸುರಿದೆಯಾ
ದುಂಬಿಗಳಿಗದೇನು ಜಂಭ!

ವಧುವಾದಳು ಇಳೆಯು
ಶುಭದೊಸಗೆ ಎಂದಳು
ನಿಮ್ಮಾಟಕೆ ಕುಪಿತ ರವಿ
ಉರಿದರೆಮಗೆ ಗೋಳು

ಮುನಿಸಿನಿಂದ ಹಾಗೆಂದೆ
ಇರಲಿ ಬಾ ಇದ್ದದ್ದೆ ಇದೆಲ್ಲ
ನಿನಗಾಗಿಯೇ ಕಾದಿಹೆವು
ಅಭಿಮಾನದಿಂದ ನಾವೆಲ್ಲ

ತಳಿರು ತೋರಣಗಳಿಂದ
ಮನೆಯ ಸಿಂಗರಿಸಿಹೆವು
ಅಭ್ಯಂಜನಗೈದು ನವವಸ್ತ್ರ
ಧರಿಸಿ ಸ್ವಾಗತ ಕೋರಿಹೆವು

ನುಸುಳಿ ಬರಲಿ ಸುಳಿಗಾಳಿ
ಹೊಂಗೆ ನೆರಳಲಿ ತಂಪಾಗಿ
ಸಿಹಿಯುಂಡು ಮಧ್ಯಾಹ್ನ
ನಿದ್ರಿಸುವೆವು ಸೊಂಪಾಗಿ

ಬರದು ಬಾರದು ಬಯಸೆ
ಬರುವುದಂತೂ ತಪ್ಪದು
ಬೇವು ಬೆಲ್ಲ ಸೇರಿದ ಸವಿ
ಬದುಕಿಗೆ ರುಚಿ ತರುವುದು
🌳🌴🌳🌱🌿☘🌳🌴🌳
✍🏼 ತ್ರಿನೇತ್ರಜ್.

Tuesday, 13 March 2018

*ಅವಸರಿಸು ನೇಸರ *


*ಅವಸರಿಸು ನೇಸರ*
[17/12/2017, 8:17 p.m.]

ಅವಸರಿಸು ನೇಸರ
ಏಕಿಷ್ಟು ನಿಧಾನ..
ಸುಸ್ತಾಗಿಹರೆಲ್ಲ ಅಲ್ಲಿ
ದುಡಿದು ಹರಿಸಿ ಬೆವರ.
ನಿಂತಿದೆ ನಭದಲಿ
ಹಕ್ಕಿಗಳ ಸಂಚಾರ..

ಮರೆಯಾಗು, ಬೇಗನಡಿ
ನಿನ್ನಿಂದಾಗಿ ಬೆನ್ನು ಸುಟ್ಟಿದೆ.
ಉರಿದೆಯಲ್ಲ ಬೆಂಕಿಯಂದದಿ,
ನಿನ್ನಿಂದ ಬುವಿ ಬಿರಿದಿದೆ.
ಕಪ್ಪಿಟ್ಟ ಬಡ ಚರುಮದಿಂದ
ಕಷ್ಟದ ಬೆವರು ಹರಿದಿದೆ.

ಹಾರದೆ ಕುಂತಿವೆ ಪಕ್ಷಿಗಳು
ತೊರೆದು ಬದುಕ ಬಾನನೆ.
ಕತ್ತಲೆ ಬರಲಿ ದಾರಿ ಬಿಡು
ಹೊಳೆಯಲಿ ಚುಕ್ಕಿ ಒಡನೆ.
ಆವಿಯಾಯ್ತು ಬೆಂದ ನೀರು
ಹೋಗು ಭಾಸ್ಕರ ಬೇಗನೆ.

ಶಪಿಸಿ ನಿಲ್ಲದಿರು ಬೇಸರದಿ
ತಂಪಾದಿತು ನೀನಿಲ್ಲದಾಗಸವು.
ನೀ ಹೊರಡೆ ಬಂದು ಚಂದ್ರ
ತಡೆವ ದುಡಿವವರ ಅಳುವು
ವೈಶಾಖದ ಮೂಢತೆಗೆ
ಜಲಚರದಳಿವು
ಬೇಗ ಜಾರು ಹುಡುಕಬೇಕಿದೆ
ಗಾಳಿಯ ಸುಳಿವು


✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.

Monday, 12 March 2018

*ಅವಳ ಕೆಣಕು*


*ಅವಳ ಕೆಣಕು*

ನನ್ನ ಕಾಲ್ಗೆಜ್ಜೆಯ
ನಾದಕೆ ಕಿವಿಗೊಡದ
ಒಲವಿನರಿವೇ ಇಲ್ಲದ
ಅರಸಿಕ ನೀನಾರೋ?
ತುಂಬಿದ ಹರೆಯವ
ಕಣ್ಣಂಚಲೂ ಅಳೆಯದೆ
ಕಲ್ಲುಮನದ ಅಲ್ಪ
ಅಮಾಯಕ ನೀನಾರೋ?
ನವ ವಸಂತನ ಸೆಳೆಯಲು
ಹಸಿರ ಹೊದ್ದು ನಿಂತ ಇಳೆ
ನನ್ನನೊಮ್ಮೆ ನೋಡಿ
ಅಸೂಯೆಯಲಿ ಬೆಂದಳು
ನೈದಿಲೆಯ ನಾಚಿಸುವ
ನನ್ನ ಮುಖಾರವಿಂದಕೆ
ಸಮವಾಗದೆ ಮಂಕಾಯ್ತು
ಚಂದಿರನ ಬೆಳದಿಂಗಳು.
ಲತೆಯನು ಹೋಲುವ 
ಮೈ ಮಾಟದ ಬಳುಕು
ನಾಗವೇಣಿಯ ಥಳುಕು
ಪ್ರೇಮ ಸೂಸಿಹ ಕಂಗಳು
ರುಚಿಸದೆ ನಿನಗೀ ಉಕ್ಕುವ
ಅನುಪಮ ರೂಪರಾಶಿ?
ನಿಸ್ಸಂದೇಹವಾಗಿ ಹೇಳುವೆ
ನೀನದಾರೋ ಸ್ತ್ರೀ ದ್ವೇಷಿ.
✍ ತ್ರಿನೇತ್ರಜ್.

Wednesday, 7 March 2018

*ಬೇಕು ಮೌನ*


    *ಬೇಕು ಮೌನ*



ಇಳಿಹೊತ್ತಲಿ ಏಕಾಂತದಿ
ನಿನ್ನ ಸಂಗಡವಿರಲು
ಬೇಡವಾಯ್ತು ಎನಗೆ
ಹೊತ್ತುಕಳೆವ ಮಾತು||

ಕತ್ತಲಾಗುವವರೆಗೂ
ಕಣ್ಣಲ್ಲಿ ಕಣ್ಣಿಟ್ಟು
ನಿನ್ನೊಳು ಕಾಣುವೆನು
ನನ್ನೆ ನಾ ಮೈಮರೆತು||

ಕಾಲ ಕಟ್ಟಳೆ ದಬ್ಬಿ
ಪ್ರೇಮ ಲತೆಯು ಹಬ್ಬಿ
ಮೌನದಲಿ ಬೆಸೆದಿದೆ
ನಮ್ಮಿಬ್ಬರನು ತಬ್ಬಿ||

ಒಲವು ಅರಳುವ ಹೊತ್ತು
ಅಧರ ಕೇಳಲು ಮುತ್ತು
ಮೌನಕೆ ಶರಣಾಗುವ ಬಾ
ಇನ್ನು ನಮಗೇಕೀ ಮಾತು||

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday, 5 March 2018

ಆಸೆ ನಿರಾಸೆ


ಆಸೆ ನಿರಾಸೆ

06/12/2017, 8:49 p.m.*
....... ..... ..... ..... ....
ಎತ್ತರ ಎತ್ತರವೆಂದರೆ
ಅದೇನೊ ಆಸೆ ನನಗೆ.
ಏರಿ ಏರಿ,ಕಂಬ ಸೇತುವೆ
ಮಧ್ಯ ಕುಳಿತೆ, ಸುಸ್ತಾಗೆ.

ಮುತ್ತಿಕೊಂಡಿವೆ ಮೋಡ
ರವಿಯ ಓಟವ ತಡೆದು.
ಓಕುಳಿಯಾಡಲು ಭಾನು
ಬಾನೆಲ್ಲ ರಂಗಾಗಿಹುದು.

ಬಣ್ಣದಾಸೆಗೆ ಹಾರಿಹವು
ಖಗಗಳು ರೆಕ್ಕೆಬಡಿದು.
ಗಗನದತ್ತ ಹಾರುವಾಸೆ
ಮನದಲಿ ಬಂದಿಹುದು.

ಕೈಗಳೆರಡ ಬೀಸುತಲಿ
ಒಮ್ಮೆಲೆ ಪುಟಿನೆಗೆದು,
ಬಳಿಸಾರಿ ರಂಗಿನಾಟವ
ನೋಡುವಾಸೆ ನಿಲ್ಲದು.

ತಾತನ ತಲೆಯಂತಹ
ಬೆಟ್ಟ ಮೂಗುಮುರಿದು,
'ನಿನ್ನ ಕೈಲಿ ಇಷ್ಟೇ ಸಾಧ್ಯ'
ಎಂದಂತೆ ಅನಿಸಿಹುದು.
...... ...... ..... ..... .....
..✍🏼 *ತ್ರಿನೇತ್ರಜ.*
ಶಿವಕುಮಾರ. ಹಿರೇಮಠ.

ದೋಣಿಯಾಟ



 _*ದೋಣಿಯಾಟ*_


ಬೆಳ್ಳಿ ಮೋಡ ಮೆಲ್ಲನೆ ಕರಗಿ
ಮುತ್ತಿನಾ ಮಳೆ ಸುರಿಸಲು
ನೆಲವ ನೆನೆಸಿ ನೆರೆದ ಹನಿಗಳು
ಕೂಡಿ ಕಿರುತೊರೆ ಹರಿಯಲು

ಪುಟ್ಟ ಕಂದನ ಮನದಿ ಹುಟ್ಟಿತು
ಮಳೆಯಲಾಡುವ ಆಸೆಯು
ಅಪ್ಪನ ಕೈಯಲಿ ಮೂಡಿಬಂತು
ಕಾಗದದ ಪುಟ್ಟ ದೋಣಿಯು

ಮರ್ಸಾನ್ ಎಲೆ ಛತ್ರಿ ಹಿಡಿದು
ಮಳೆಯ ತುಂತುರು ನಡುವಲಿ
ಬಯಲ ನೀರಲಿ ದೋಣಿ ಬಿಡೆ
ಹರುಷ ಹರಿಯಿತು ಮೊಗದಲಿ.

ಬಾಲ್ಯದಾ ಸಿಹಿ ನೆನಪು ಮರಳಿ
ಅಪ್ಪನು ಮತ್ತೆ ಮಗುವಾದರು
ಅಮ್ಮ ನೋಡಿ ಕೋಪತಾಳಲು
ಇಬ್ಬರೂ ನಟಿಸುತ ನಕ್ಕರು.

.... ... ... .... .... ....
✍🏼 ತ್ರಿನೇತ್ರಜ್
5-3-18
ಶಿವಕುಮಾರ. ಹಿರೇಮಠ.

Friday, 2 March 2018

*ಚುನಾವಣೆ*


[02/03, 5:46 p.m.]
ಕವನ

 
*ಚುನಾವಣೆ*

ಬಂತು ಚುನಾವಣೆ ಮತ್ತೆ
ಸ್ವಾಗತ ಸುಸ್ವಾಗತ
ನಾಸಿಕಕೆ ನವನೀತ ನಾತ
ಇದು ಅವರಿಗೆ ಕರಗತ

ಮನ ಮನೆಗಳ ಒಡೆಯುವ
ಧ್ವಜಗಳ ಹಾರಾಟ
ಜಿದ್ದಾಜಿದ್ದಿಗೆ ಬಲಿಎಷ್ಟೋ
ಅಧಿಕಾರಕ್ಕೆ ಹೊರಾಟ

ಹಳ್ಳಿ ಹಳ್ಳಿಗೂ ಸಾಂಕ್ರಾಮಿಕ
ಬಾಂಧವ್ಯದ ಬಿರುಕು
ಪಾರ್ಟಿಗಳ ಪೈಪೋಟಿಗೆ
ಸಂಬಂಧದಿ ಒಡಕು

ಜನಸೇವಕರಿವರು ಅದ್ಹೇಗೆ
ನಾಯಕರಾಗಿ ನಿಂತರು?
ಜನಬಲಕೆ ಕಣಕ್ಕಿಳಿದರು
ಕೋಟಿಗಳ ಸಿರಿವಂತರು

ಪ್ರಜಾಸೇವೆಗೆಂದೇ ಹಾಕಿ
ನಿಷ್ಠೆಯ ಮುಖವಾಡ
ತೋರುವರು ಗೆದ್ದಮೇಲೆ
ಸ್ವಾಭಿವೃದ್ಧಿಯ ಪವಾಡ

ಪ್ರಜೆಯನ್ನು ಪ್ರಭು ಎನ್ನುವ
ಕಾಲವೂ ಬಂದೀತೆ?
ಮುಗಿಯಲೊಮ್ಮೆ ಚುನಾವಣೆ
ನಮ್ಮ ಬವಣೆ ತಪ್ಪೀತೆ?
.... .... ..... .... ....
✍🏼  ತ್ರಿನೇತ್ರಜ್

ಶಿವಕುಮಾರ. ಹಿರೇಮಠ


Tuesday, 27 February 2018

*ಹುಸಿಕೋಪ*

   

*ಹುಸಿಕೋಪ*
[06/12/2017, 8:50 p.m.]
.... .... .... .... ....
ಕೆಲ ತಿಂಗ್ಳು ಸುಮ್ಮ್ನಿದ್ದೆ,
ಇದ್ದಂತೆ ಮಾತಿನಲ್ಲಿ ಓಟೆ.
ಜಾಸ್ತಿಯಾಗಿದೆ ಇತ್ತೀಚೆಗೆ
ಅದೇಕೊ ನಿನ್ನ ಗಲಾಟೆ!!

ಊಟಕೆ ತಡವಾದರಷ್ಟೇ!
ಶುರು ಮಾಡುವೆ ಗಲಾಟೆ.
ನನ್ನ ಊಟವಾಗೋತನಕ
ನಿಲ್ಲಲಾರದು ನಿನ್ನ ತಂಟೆ.

ಎನೇನೋ ಬೇಕೆಂಬ ನಿನ್ನ
ಉದ್ದುದ್ದದ ಆಸೆ,ಬೇಡಿಕೆ.
ನಿನ್ನಿಂದ ನನಗೆ ಹೆಚ್ಚುತ್ತಿವೆ
ದಿನವೂ ನೂರು ಬಯಕೆ.

ಆಟವಂತೆ ಆಟ! ಆಡುತ್ತ
ಕೊಡುತ್ತೀಯ ಈ ಒದಿಕೆ.
ಮುದ್ದಿಕ್ಕಿ ಗುದ್ದು ಕೊಡುವೆ
ಬಾ ಮೊದಲು ಹೊರಕ್ಕೆ.
..... .... ..... ..... ..... ...
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

ಸಬಲೆ


 
         ಸಬಲೆ
ನವಭಾವಗಳ ಬೆನ್ನೇರಿ,
ಸದಾ ನನ್ನ ಕಾಡಿಬೇಡಿ;
ಪ್ರೀತಿಯ ಸೂರೆಗೈದು
ಹಚ್ಚಿಟ್ಟೆ ಒಡಲಲಿ ಕಿಡಿ.

ಕನಸ ನೂರು ತೋರಿ,
ಮನದಣಿಯೆ ಈಜಾಡಿ;
ಈಗೆನ್ನ ತೊರೆದು ನೀ
ಹೊರಟೆಯಾ? ಹೇಡಿ!

ಜಾರದಿರು ನೀ ನೇಸರ.
ಬಂದು ಬೆಳಗೀ ಬಾಳು.
ಮುನಿದು ಸಾಗೆ ದೂರ.
ನನ್ನಂತೆ ಭುವಿ ನೂಂದಾಳು.

ಪ್ರೀತಿಕೊಂದವ ಇವನು,
ಛೀ! ಅಲ್ಲೆನಗೆ ಸರಿಜೋಡಿ
ಕಡಲೇ ಬಾ ಮೇಲೇರಿ.
ಬರುವೆ ನಿನ್ನೊಡಗೂಡಿ.

ಛೇ! ಛೇ!ನಾನೆಂಥ ಕ್ರೂರಿ?
ಜನಿಸಬೇಕು ನನ್ನೊಡಲಕುಡಿ.
ದಿಟ್ಟೆ ನಾ; ಸಾಧಿಸಿತೋರುವೆ.
ಜಗ ನಗುವುದು ನಿನ್ನ ನೋಡಿ.
    .... .... ..... .... ..... ....
 ✍.. ತ್ರಿನೇತ್ರಜ.
        ಶಿವಕುಮಾರ.ಹಿರೇಮಠ.