Wednesday 27 June 2018


     ಕನ್ನಡ ಜ್ಯೋತಿ

ಕನ್ನಡದ ಜ್ಯೋತಿಯ ಬೆಳಗಿಸುವ
ಕರುನಾಡು ಹಣತೆ
ಅಭಿಮಾನ ತೈಲ
ಸಾಹಿತ್ಯ ಬತ್ತಿಯ ಅದ್ದಿ

ಗಡಿ ಗುಡಿಗಳಲ್ಲಿ ನೆರೆಭಾಷೆ ನುಗ್ಗಿ
ಕನ್ನಡಕೆ ಕಂಟಕವ ತರಲು ಬಿಡೆವು
ನಮ್ಮ ನೆಲ ನಮ್ಮ ಜಲ ಆಪೋಷಿಸೊ
ಪರಭಾಷೆ ಕಳೆಯನ್ನು ಕಿತ್ತೊಗೆವೆವು
ಭುವನೇಶ್ವರಿಯ ಭವ್ಯದೇಗುಲವ
ಜನ ಮನಗಳಲ್ಲಿ ನಿರ್ಮಿಸುವೆವು
ನುಡಿಯನ್ನು ಬಳಸಿ ಬರಹವನು ಕಲಿಸಿ
ಮಗು ಮಗುವಿಗಕ್ಷರವ ತುಂಬುವೆವು
ಗಣಿಪುರಗಳಾದರೂ ಬೆಳಗಾವೇ ಆದರೂ
ಪರಭಾಷೆಯಾ ಗರವ ಓಡಿಸುತ
ಕನ್ನಡದ ಜ್ಯೋತಿಯ ಬೆಳಗಿಸುವ

ನಾಡ ಕೈಂಕರ್ಯ ಆದ್ಯತೆಯ ಕಾರ್ಯ
ಕಂಕಣವ ಕಟ್ಟಿ ನಾವ್ ಮುನ್ನಡೆವೆವು
ಮಲೆನಾಡೆ ಇರಲಿ ತುಳುನಾಡೆ ಇರಲಿ
ಬಯಲು ಸೀಮೆ ಇರಲಿ ಕೂಡಿರುವೆವು
ತಾಯ ಕಿರೀಟದಿ ಜ್ಞಾನ ಪೀಠದೆಂಟು
ರತ್ನಗಳು ಹೊಳೆದು ಮಿಂಚುತಿಹವು
ಕಬ್ಬಿಗರ ಒಡಲಿದು ಕಾವ್ಯದ ಕಡಲಿದು
ನುಡಿಯೆ ಐಸಿರಿಎಮಗೆ ಅನವರತ
ಸಾಹಿತ್ಯ ಕೃಷಿಗೈದು ಅಕ್ಷರಗಳ ಬಿತ್ತುತ
ಜಗದೊಳಗೆ ಕನ್ನಡವ ಬೆಳಗುವ
ಕನ್ನಡದ ಜ್ಯೋತಿಯ ಬೆಳಗಿಸುವ

ಎದೆಯೊಳಗೆ ಉಲಿವ ಹೃದಯಕೂಡ
ಕನ್ನಡದ ನುಡಿಯನ್ನೆ ಜಪಿಸುತಿಹುದು
ಧಮನಿ ಧಮನಿಗಳಲ್ಲಿ ಹರಿವ ರಕ್ತ
ನಲ್ನುಡಿಯ ಮಿಂಚನ್ನ ಹರಿಸಿರುವುದು
ಜನ್ನುಡಿ ಕನ್ನಡ ರನ್ನುಡಿ ಕನ್ನಡ
ಪಂಪನುಡಿದಾಡಿದ ಪೊನ್ನುಡಿಯಿದು
ಕುಮಾರವ್ಯಾಸ, ಕವಿ ಕನಕದಾಸ
ಬಸವಣ್ಣ ಮಹಾದೇವೀ ವಚನವಿದು
ಹಿಂದೆಯೂ ಕನ್ನಡ ಇಂದಿಗೂ ಜನ್ನಡ
ಎಂದೆಂದೂ ಕನ್ನಡವ ಮೆರೆಸುವ
ಕನ್ನಡದ ಜ್ಯೋತಿಯ ಬೆಳಗಿಸುವ


ತ್ರಿನೇತ್ರಜ

(ಶಿವಕುಮಾರ ಹಿರೇಮಠ)

No comments:

Post a Comment