Tuesday 27 February 2018

*ಹುಸಿಕೋಪ*

   

*ಹುಸಿಕೋಪ*
[06/12/2017, 8:50 p.m.]
.... .... .... .... ....
ಕೆಲ ತಿಂಗ್ಳು ಸುಮ್ಮ್ನಿದ್ದೆ,
ಇದ್ದಂತೆ ಮಾತಿನಲ್ಲಿ ಓಟೆ.
ಜಾಸ್ತಿಯಾಗಿದೆ ಇತ್ತೀಚೆಗೆ
ಅದೇಕೊ ನಿನ್ನ ಗಲಾಟೆ!!

ಊಟಕೆ ತಡವಾದರಷ್ಟೇ!
ಶುರು ಮಾಡುವೆ ಗಲಾಟೆ.
ನನ್ನ ಊಟವಾಗೋತನಕ
ನಿಲ್ಲಲಾರದು ನಿನ್ನ ತಂಟೆ.

ಎನೇನೋ ಬೇಕೆಂಬ ನಿನ್ನ
ಉದ್ದುದ್ದದ ಆಸೆ,ಬೇಡಿಕೆ.
ನಿನ್ನಿಂದ ನನಗೆ ಹೆಚ್ಚುತ್ತಿವೆ
ದಿನವೂ ನೂರು ಬಯಕೆ.

ಆಟವಂತೆ ಆಟ! ಆಡುತ್ತ
ಕೊಡುತ್ತೀಯ ಈ ಒದಿಕೆ.
ಮುದ್ದಿಕ್ಕಿ ಗುದ್ದು ಕೊಡುವೆ
ಬಾ ಮೊದಲು ಹೊರಕ್ಕೆ.
..... .... ..... ..... ..... ...
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

ಪ್ರಾಣಸಖಿ


     
       ಪ್ರಾಣಸಖಿ
      ---------------
ಬಾಲ್ಯದಲಿ ಜೊತೆಯಾದೆ,
ಪ್ರಾಣಸಖಿ ಎನಗಾದೆ .
ಏಕಾಂಗಿತನವನು ನೀ
ಬಂದು ನೀಗಿದೆ.
ಎನ್ನಯ ಒಡನಾಡಿಯಾದೆ.
ನೆಚ್ಚಿನ ಒಡನಾಡಿಯಾದೆ.|ಪ|

ಪಾಠದಲಿ ಜೊತೆಯಾದೆ,
ಆಟದಲೂ ಬಲವಾದೆ;
ರಂಗೋಲಿ ಕಲಿಸಿದೆ,
ಜೋಕಾಲಿ ಜೀಕಿದೆ.
ನನ್ನಮ್ಮ ಬೈದಾಗ
ಬೆನ್ನಸವರಿ ರಮಿಸಿದೆ.
ಕೈಗೆನಗೆ ಮದರಂಗಿಯ
ಹಾಕಿ ನೀ ಸಂಭ್ರಮಿಸಿದ್ದೆ.|೧|

ನನ್ನ ಮದುವೆಯಲ್ಲಿ
ಕುಣಿದು,ದಣಿದು;
ನನ್ನ ಸಿಂಗರಿಸಿ,
ನಕ್ಕೂ ನಲಿದು;
ಪತಿಮನೆಗೆ ಹೊರಟಾಗ
ಇಲ್ಲದ ನಗುತಂದು,
ಮನದಲ್ಲೆ ಅಳುವ ನುಂಗಿದೆ.
ಬಿಟ್ಟಿರಲು ನಾನೂ ನೊಂದೆ.|೨|

ಉಸಿರಿರುವ ವರೆಗೂ
ನಿನ್ನನೆಂದೂ ಮರೆಯೆ.
ಸಾಯುವ ಮುನ್ನ
ನಿನ್ನಕಾಣ ಬಯಸುವೆ.
ಮತ್ತೊಂದು ಜನ್ಮದಲೂ
ಮನ ನಿನ್ನ ಬಯಸಿದೆ.
ಈ ಜೀವದ ಗೆಳತಿಯಾದೆ.|೩|

... ... ... ... ... ... ... ... ...
✍...ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಸಬಲೆ


 
         ಸಬಲೆ
ನವಭಾವಗಳ ಬೆನ್ನೇರಿ,
ಸದಾ ನನ್ನ ಕಾಡಿಬೇಡಿ;
ಪ್ರೀತಿಯ ಸೂರೆಗೈದು
ಹಚ್ಚಿಟ್ಟೆ ಒಡಲಲಿ ಕಿಡಿ.

ಕನಸ ನೂರು ತೋರಿ,
ಮನದಣಿಯೆ ಈಜಾಡಿ;
ಈಗೆನ್ನ ತೊರೆದು ನೀ
ಹೊರಟೆಯಾ? ಹೇಡಿ!

ಜಾರದಿರು ನೀ ನೇಸರ.
ಬಂದು ಬೆಳಗೀ ಬಾಳು.
ಮುನಿದು ಸಾಗೆ ದೂರ.
ನನ್ನಂತೆ ಭುವಿ ನೂಂದಾಳು.

ಪ್ರೀತಿಕೊಂದವ ಇವನು,
ಛೀ! ಅಲ್ಲೆನಗೆ ಸರಿಜೋಡಿ
ಕಡಲೇ ಬಾ ಮೇಲೇರಿ.
ಬರುವೆ ನಿನ್ನೊಡಗೂಡಿ.

ಛೇ! ಛೇ!ನಾನೆಂಥ ಕ್ರೂರಿ?
ಜನಿಸಬೇಕು ನನ್ನೊಡಲಕುಡಿ.
ದಿಟ್ಟೆ ನಾ; ಸಾಧಿಸಿತೋರುವೆ.
ಜಗ ನಗುವುದು ನಿನ್ನ ನೋಡಿ.
    .... .... ..... .... ..... ....
 ✍.. ತ್ರಿನೇತ್ರಜ.
        ಶಿವಕುಮಾರ.ಹಿರೇಮಠ.

ಹತ್ತು ಹನಿಗವನಗಳು-೧

ಹನಿಗವನ-1

 ಸಮರಸ
----'''''----
ಪತಿತೆಯೊಡನೆ ಸರಸಕ್ಕಿಂತ
ಸತಿಯೊಡನೆ ವಿರಸ
ಸಮರವೇ ಲೇಸು.
ಸೋತರೂ ಗೆದ್ದರೂ
ಸಮರಸವೇ ಆಗುವುದು ಬಾಳು.
..... ...... ....... .......

ಹನಿಗವನ-2

          ಬಂಧಿ
-------'''-----
ಸರಸವನ್ನರಸಿ ನಿನ್ನ
ತೋಳಸೆರೆಯಲಿ ಸೇರಿದ
ಸಮಯದಿಂದ ನಾ
ಸದ್ದಿಲ್ಲದೆ ನನ್ನ ಸ್ವಂತಿಕೆಗೆ
ತೋರಿದೆ ಸಾವಿನೂರ.
ತಾಯಿಯಾದಳು ದೂರ,
ಬದುಕೀಗ ಬಲುಬೇಸರ.
...... ..... ..... .... .....
✍..ತ್ರಿನೇತ್ರಜ.

ಹನಿಗವನ -3

[19/11, 6:59 p.m.]
       ಸತ್ಯ ಕಹಿ
..... ...... ..... ......
'ಮುಖ ಪುಸ್ತಕ'ದಲ್ಲಿನ  
ಭಾವಚಿತ್ರಕೆ ಸೋತು👩🏻
'ಪ್ರೀತ್ಸೊಣ ಬಾ' ಎಂದ್ಬುಟ್ಟೆ.
ಮನೆಗ್ಬಂದ್ಬುಟ್ಟು, ನಿನ್ನ  👧🏾
ಮುಖತೋರ್ಸಿ ನನ್ನ
ಹೃದಯಾನೇ ಒಡದ್ಬುಟ್ಟೆ.😳🤢😭

ಹನಿಗವನ -4
[19/11, 8:46 p.m.]

     ಏಕೆ ಹೀಗಾಯ್ತೊ?
...........................

ಪ್ರೇಮಿಗಳ ದಿನ ಅವಳೆಂದಳು
'ಸೆಲ್ ಒಂದು ತಂದುಕೊಡಿ'.
ಒಂದೇ ಏಕೆಂದು ಎರಡು
ಎವರೆಡಿ ತಂದು ಕೊಟ್ಟೆ ನೋಡಿ.
ಅಂದಿನಿಂದ ದೂರಾದಳಲ್ಲ! ನನ್ನ ಹೃದಯವಾಯ್ತು ಒಡೆದ ಕನ್ನಡಿ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -5
[20/11, 8:45 p.m.]
.... ... ... .... .... .... ... ....
         ಅರ್ಥ ಆಯ್ತು ಬಿಡಿ!!    
        ----------------
ಜಪಾನ್ ಅಲ್ಲ ಇದು ನಮ್ಮ  ಭಾರತ.
ಮತ್ಯಾಕೆ ಇವರಿಗೆ ಈ ಧಾವಂತ?
ತಾಲೀಮು ನಡೆಸಿ ಸಜ್ಜಾಗುತ್ತಿದ್ದಾರೆ  ಇವರುಗಳು.
ಆಗಲು ನಮ್ಮ ದೇಶದ ಭಾವಿ
ಅಧಿಕಾರಿಗಳು!!
ತಪ್ಪಿದ್ರೆ ದೇಶೊದ್ಧಾರಕ ಭಾವಿ
ರಾಜಕಾರಣಿಗಳು!!!
 ...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -6
[26/11, 8:42 p.m.]
........................
    ಪರಿಸರ ಬಂಧು
..........................
"ದುಡ್ಡೇ ದೊಡ್ಡಪ್ಪ" ಎಂಬ
ಮಾತೀಗ ಹಳತಾಯ್ತು.
ಪರಿಸರವೇ ಪ್ರಾಣಮೂಲ
ಎಂಬುದು ಮನನವಾಯ್ತು.
ತಿಮ್ಮಕ್ಕನ ಕಾರ್ಯಕ್ಕೆ
ತಲೆಬಾಗುವಂತಾಯ್ತು.
ಖಗಕೆ ನೆಲೆ,ಮೃಗಕೆ ಛಾಯೆ;
ಕೀರ್ತಿ ಅಜರಾಮರವಾಯ್ತು.
... ..  ...  ...  ...  ... ...
✍.. ತ್ರಿನೇತ್ರಜ.

ಹನಿಗವನ -7
[27/11, 7:08 p.m.]

  ಕನ್ನಡಿಗನಾಸೆ

ಹೆಸರಾಯಿತು, ಉಸಿರಾಯಿತು;
ಜಗದ ಹಸಿರಾಗಲಿ ನಮ್ಮ ಕನ್ನಡ.
ನುಡಿಯಾಯ್ತು,ಬರಹವಾಯ್ತು;
ಹಾಸುಹೊಕ್ಕಾಗಬೇಕಿದೆ ಕನ್ನಡ.
............................
✍..ತ್ರಿನೇತ್ರಜ.


[27/11, 9:00 p.m.]
ಹನಿಗವನ -8
ಕ್ಷಮಿಸಿಸಲ್ಲ.
................
ಕನ್ನಡ ಎನೆ ಎದೆ ಉಬ್ಬುವುದಿಲ್ಲ?
ಕನ್ನಡ ಎನೆ ಕಿವಿ ನಿಮಿರುವುದಿಲ್ಲ?
ನಿನ್ನದೊಂದು ಜನ್ಮವೇ ಅಲ್ಲ.
ಅನ್ಯಭಾಷೆಯ
ದಾಸ್ಯಕೆ ಜಾರಿಹರನ್ನ
ಕನ್ನಡಾಂಬೆ ಕ್ಷಮಿಸುವುದೂ ಇಲ್ಲ.
................
✍..ತ್ರಿನೇತ್ರಜ

ಹನಿಗವನ -9

 *ಪರೀಕ್ಷೆ* 
ಕಾದೆ, ಕಾದು ಸಾಕಾದೆ
ಆದರೂ ಇದೆ ನಿರೀಕ್ಷೆ
ಜಿಡ್ಡುಗಟ್ಟಿದೀ ಮನಕೆ
ನೀಡು ಕೊಂಚ ದೀಕ್ಷೆ
ಈಜಿ ಸಾಧಿಸಲೇಬೇಕು
ದೇವರಿಟ್ಟ ಈ ಪರೀಕ್ಷೆ
        ............
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ

ಹನಿಗವನ -10
ಆಹಾ!   ಕನ್ನಡ..
......................
ಹೃದಯಕ್ಕೆ ಹಗುರ,
ಅಧರಕ್ಕೆ ಮಧುರ,
ಕನ್ನಡದ ನುಡಿಸಾರ,
ಹೀರೇ; ಪಂಡಿತನಂತೆ
ಈ ಪಾಮರ!

ಬರೆದರೆ ಬಂಗಾರ,
ಜ್ಞಾನಪೀಠ ಹಂದರ,
ಕರುನಾಡ ಶೃಂಗಾರ,
ಕನ್ನಡ ಸವಿನುಡಿಯು
ಸವಿ ನಾದಸ್ವರ.
.....................
✍..ತ್ರಿನೇತ್ರಜ
ಶಿವಕುಮಾರ.ಹಿರೇಮಠ.

Wednesday 21 February 2018

*ಯಾರಿಗಾಗಿ?*


*ಯಾರಿಗಾಗಿ?*
09/12/2017, 1:57 p.m.

   

ದೇಶದ ಬೆನ್ನೆಲುಬುಗಳ
ಏಣಿಮಾಡಿ ಏರುತಿರುವವರೆ
ಯಾರಿಗಾಗಿ? ನಿಮ್ಮಾಟ
ಯಾರಿಗಾಗಿ?

ಚಿಂತೆಯಿಲ್ಲದ ನಾಯಕರು
ಮತ ಹಬ್ಬಗಳು ಬಂದಾಗ,
ಮೊಸಳೆ ಕಣ್ಣೀರಿಂದ ಖಾಲಿ
ನಡೆಸುವ ಸಂವಾದ ಯಾರಿಗಾಗಿ?

ಒಣಗಿದ ತೆಳು ಮೋಡಗಳು
ನೋಡಿ ನೋಡದಂತೆ ಸಾಗುವಾಗ ,
ತಾಸುಗಟ್ಟಲೆ ಅರಚುವ
ಚಿಂತಕರ ಸಂವಾದ ಯಾರಿಗಾಗಿ?

ಸೆಟೆದುಹೋದ ಪೈರನು
ನೋಡಲಾಗದ ಬಡದೇಹ
ಒಣಮರಕೆ ನೇತಾಡುವಾಗ,
ಬುದ್ಧಿಗಳ ಸಂವಾದ ಯಾರಿಗಾಗಿ?
----------------
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

*ದಾಹ*

‌‌‌‌ಭಾವಗೀತೆ
       *ದಾಹ*
[12/12/2017, 7:24 p.m.] 
ದಾಹವೆಂಬ ಭಾವನಾದವು
ತುಂಬಿಕೊಂಡು ತನುಮನ
ತಣಿಯದಂತ ತುಡಿತದಿಂದ ತಳಮಳಿಸಿಹುದು ಜೀವನ.

ತೋಟದಲ್ಲಿ ತುಂಬಿದೆ
ಅಗಣಿತಕಲ್ಪ ಸಿಹಿ ಫಲ.
ಕೈಗೆಟುಕದ ಎತ್ತರಕ್ಕಿದೆ!
ಯತ್ನಿಸದಿರೆ ಏನುಫಲ?

ಹಸಿವ ನೀಗಲು ಕುಡಿದೆನು
ಮನದಣಿಯೇ ಜ್ಞಾನ ಜಲ.
ಎತ್ತರೆತ್ತರಕ್ಕೆ ಏರಲು ಎನಗೆ
ಕೂಡಿಬರಲಿ ಬೇಗನೆ ಕಾಲ.

ಶ್ರೇಷ್ಠರು ನೀಡಿಹೋಗಿಹ
ಜ್ಞಾನಕಣಜವೇ ಬೆನ್ನಿಗಿದೆ.
ಸಾಧಕರ ಶಿಖರವನೇರೊ
ಆಸೆ ಎದೆಯ ತುಂಬಿದೆ.

ಹಾರೈಕೆ ಹೆತ್ತವರದು
ಸದಾ ರಕ್ಷೆಯ ನೀಡಿದೆ.
ಗುರಿಯು ಬಲು ಎತ್ತರ
ಸಾಧಿಸುವೆ ಛಲಬಿಡದೆ.
~~~~~~~~~~~~~~
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

*ಬನ್ನಿರೆಲ್ಲ ಶಾಲೆಗೆ*


 *ಬನ್ನಿರೆಲ್ಲ ಶಾಲೆಗೆ*
[29/5/2017, 10:54 a.m.]
   

ವಿದ್ಯೆಯೆ ಬಾಳಿನ ಬೆಳಕು
ಸಾಕ್ಷರರಾಗಿ ಜಗದೊಡನೆ ಮುನ್ನಡೆಯಬೇಕು.
ಬನ್ನಿರಿ ಬನ್ನಿರಿ ಶಾಲೆಯ ಕಡೆಗೆ
ಸಾಗೋಣ ಒಟ್ಟಾಗಿ ಬೆಳಕಿನ ಕಡೆಗೆ.|ಪ|

ವಿದ್ಯೆಯಿಲ್ಲದ ಬಾಳು ಹದ್ದಿಗಿಂತಕಡೆ.
ಕಲಿಯೋಣ ಅಕ್ಷರವ ಶಾಲೆಯೆಡೆಗೆ ನಡೆ.
ಸಾಕಿನ್ನು ಮೋಸಹೋಗೊ
ದಡ್ಡತನದ ಬಾಳು.
ಜ್ಞಾನವಂತರಾದರೆ ಇರದು
ಇಂಥ ಗೋಳು.|೧|

ಶಾಲೆಯಿದು ಸರ್ವಧರ್ಮ ದೇವಾಲಯವಣ್ಣ
ಶ್ರದ್ಧೆಯಿಂದ ವಿದ್ಯೆಯ ಕೃಪೆ ಪಡೆಯೋಣವಣ್ಣ
ನಲಿಯೋಣ ಕಲಿಯೋಣ
ಎಲ್ಲ ಬನ್ನಿರಿಲ್ಲಿ
ಸುಶಿಕ್ಷಿತರಾದರೆ ಕಷ್ಟಗಳಿನ್ನೆಲ್ಲಿ.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.

ಕನ್ನಡವೆಮ್ಮ ನುಡಿಸಿರಿ

29/12/2017, 10:34 p.m.
 ಭಾವಗೀತೆ

ಕನ್ನಡವೆಮ್ಮನುಡಿಸಿರಿ


ಕನ್ನಡವೆಮ್ಮ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|

ಮಲೆನಾಡಿನ ಮಧುರ ಕನ್ನಡ

ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|

ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು 
ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ, 
ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ 
ಭುವನೇಶ್ವರಿಯ  ಹೊನ್ನಾಡು.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.




✍🏼 ತ್ರಿನೇತ್ರಜ


ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com

*ಏಕಾಂಗಿನಿ*


      *ಏಕಾಂಗಿನಿ*
02/01, 8:42 p.m.
     

ದೂರತೀರವು ಆಸೆ ತೋರುತ
ದಿನವೂ ನನ್ನ ಸೆಳೆದಿದೆ.
ನೀರ ತೊರೆದು ಬಾನಿನೊಡನೆ
ಬೆರೆತ ಹಾಗೆ ತೋರಿದೆ.

ಬಂಧನದ ಬದುಕೇಕೊ
ಉಸಿರ ಕಿತ್ತುಕೊಳುತಿದೆ.
ಬತ್ತುತಿರುವ ಲಜ್ಜೆಯೇಕೊ
ದೂರದೂರ ಬಯಸಿದೆ.

ನಿಂತ ನೀರು ಈಜಲೆನಗೆ
ಒತ್ತಾಸೆಯ ತುಂಬಿದೆ.
ಕಂಬಿಕಿತ್ತ ಕಿಟಕಿಯೊಂದು
ಪರದೆ ಸರಿಸಿ ಕರೆದಿದೆ.

ವಿರಹದಿರಿತ ಸಹಿಸಲೆಂತು
ಮನಕೆ ತಿಳಿಯದಾಗಿದೆ.
ಹೃದಯಾಳದ ಸುಪ್ತ ಪ್ರಜ್ಞೆ
ದುಡುಕದಂತೆ ತಡೆದಿದೆ.

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

*ಮೂಕವೇದನೆ*



      *ಮೂಕವೇದನೆ* 
   
ಎಳಸು ಎಸಳುಗಳುಗಳಿಗೆ
ಚೀತ್ಕಾರ ತರುವ ನೋವು
ಎದೆ ಮೇಲೆ ಕ್ಷಣ ಕ್ಷಣವೂ
ಬಂದೆರಗಿದಂತೆಯೆ ಸಾವು

ದುಷ್ಟ ಹಾಸಿಗೆಯ ನಗು
ಹುಚ್ಚಾಟ ಹೊರಳಾಟ
ನಲುಗುವ ದಿಂಬುಗಳು
ಹೊಸಕಾಟ ಗೋಳಾಟ

ಸುಕೊಮಲ ಕುಸುಮಕೆ
ಏಕಿಂಥ ಈಟಿಯ ತಿವಿತ
ಕುದಿವ ಎದೆಯ ಬಿಸಿಗೆ
ಬೆಂದ ಮೈ ಬೆವರ ನಾತ

ಆಯಾಸದ ನಿದ್ರೆಯಲ್ಲೂ
ಮತ್ತದೇ ಕೆಟ್ಟ ಕೆಟ್ಟ ಕನಸು
ಕನಸೋ ಇಲ್ಲ ನಿಜವೋ
ಅರಿಯದಂತಹ ವಯಸು

ಬಾನಾಡಿಯಾಗಿ ಹಾರುವ
ಕನಸುಗಳೆಲ್ಲ ಸುಟ್ಟವು
ಬೇಡವಾದ ಬವಣೆಗಳ
ಭಾರಕ್ಕೆ ಕಾಲು ಕುಸಿದವು

ಗಿಡುಗನಿಗೆ ಸಿಕ್ಕ ಗುಬ್ಬಚ್ಚಿ
ಒದ್ದಾಡುವಂತಹ ಹಿಡಿತ
ತಿಂಗಳಾದರೂ ನೆತ್ತರು
ಕಾಣದಿರೆ ಭಯ ಆಘಾತ

ಹದಿನಾರರ ಹರಯಕೆ
ಬೇಡವಮ್ಮ ನರಕ ಶಿಕ್ಷೆ
ಕೇಳದೆ ಕೊರಳಿಗೆಬಿದ್ದ
ಭಿಕ್ಷೆ ಮಾಂಗಲ್ಯದ ರಕ್ಷೆ

✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Monday 19 February 2018

ಓ ನನ್ನ ನಲ್ಲೆ

ಓ ನನ್ನ ನಲ್ಲೆ

         
💗💗💗💖💗💗💗
     
ಕುಣಿವಾ ಬಾ ಎನ್ನ ಚೆಲುವೆ.
ಬೇಡ, ನಮಗ್ಯಾರ ಪರಿವೆ.
ಸೆಳೆದಿದೆ ನಿನ್ನಯ ಒಲವು .
ಸೋತಿದೆ ಪ್ರಕೃತಿಗೆ ಮನವು.

ಇಳೆಗೆ ಮನಸೋತ ಭಾನು,
ಬಾನಲಿ ಚಿತ್ರ ಬಳಿದಿಹನು.
ಆ ನೇರಳೆ, ತಿಳಿಹಸಿರನ್ನು
ಹರಡಿ ಹಿನ್ನೆಲೆ ನೀಡಿಹನು.
'ಮಿಲನಕೆ ಮುನ್ನುಡಿಯಂತಿದೆ ನೋಡು, ಲಾಸ್ಯವಾಡು' ಎನುತಿಹನು.

ಮನದ ದುಗುಡನು ತೊರೆದು,
ಚಿಂತೆಯ ಕಾರ್ಮೋಡ ಕಳೆದು,
ಜಗವೆದುರಿಸೋ ಛಲವ ತಳೆದು
ನರ್ತನ ಗೈಯೋಣ ಬಾ ಇಂದು.
ಜೊತೆಯಲೆ ಸಾಗುವೆ ಓ ನನ್ನ ನಲ್ಲೆಯೆ
ನಿನ್ನ ಕೈಹಿಡಿದು ಎಂದೆದು.
..... .... .... .... ..... ..... ....
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

*ಗಮನೆ *

*ಗಮನೆ *
          
[09/02, 11:09 a.m.]
     
ತಾಳದೆ,ತೋಳಲಾಡಿದೆ
ಆಸೆಭರಿತ ಭಾವನೆ
ಕಲ್ಪಿಸಲಾಗದ ಕಲ್ಪನೆ
ಸರಿದೂಗದಾ ಸ್ಪಷ್ಟಣೆ
ಹರೆಯವು ಮೈದುಂಬಿ
ಬಂದೆ ನಾ ದೈವವ ನಂಬಿ

ಜನನಕಾಲದಿಂ ಎದೆಯ ಗೂಡಲಿ
ಮೂಡಿಹುದಿದೊಂದು ಹೆಬ್ಬಯಕೆ
ಅದಮ್ಯವಾದ ಆಸೆಯು ಎದ್ದಿದೆ
ತಾಳ್ಮೆಯೆ ಬೇಡ ಈ ಮನಕೆ
ಈಡೇರುವುದೆಂದೋ ನಾ ಕಾಣೆ
ಈ ವೇದನೆಗೆ ಯಾರು ಹೊಣೆ
ನರನಾಡಿಯೊಳೆಲ್ಲ ನುಡಿದಿದೆ
ಝೇಂಕರಿಸುತಾ ರುದ್ರ ವೀಣೆ

ಇಳಿದೆ, ಇಳೆಯ ಸೆರಗಲಾಡಿ
ತೊರೆದೆ ತವರನು ಓಡಿದೆ
ತಂದೆ ಸುರಿದ ಪ್ರೀತಿಯ ಮಳೆಗೆ
ಉಬ್ಬಿದೆ ಹಬ್ಬಿದೆ ತುಳುಕಾಡಿ
ಸೊರಗಿದೆ ಸಣ್ಣಾದೆ
ರವಿಯ ಸುಡುತಾಪಕೆ
ಬೆಂದುಹೋದೆ ಬತ್ತಿಹೋದೆ
ಆಸೆಯ ಮಾತ್ರ ಬಿಡದಾದೆ

ಬೇರುಗಳ ಸವಿ ಹೀರುತ ಬನದಲಿ
ಬಳುಕಿದೆ ಬಂಡೆಗಳ ಸವೆಸುತಲಿ
ಕಾರ್ಗತ್ತಲಲಿ ಬೆಚ್ಚಿದೆ ನಾ ಭಯದಿ
ಅವಡುಗಚ್ಚಿ ಸಾಗಿದೆ ಮೌನದಲಿ
ಹುಡುಕುವೆ ಹೊಸಹಾದಿ
ಹೇಗಿದ್ದರೂ ನಾ ನದಿ
ಸಾಗುತಿರುವೆ ಅರಸಿ ಭರದಿ
ಹುಡುಕಿ ಬೆರೆಯವೇ ಸಾಗರದಿ
*** *** **** **** ****
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday 18 February 2018

ಲಾಲಿ ಹಾಡು

ಲಾಲಿ ಹಾಡು
         
ನಯವಾಗಿ ಕಣ್ಸೇರಲು
ನಿದಿರಾದೇವಿ ಬಂದಿಹಳು|
ಹೊಂಗನಸ ತೋರಲು
ನಿನ್ನ ಕರೆದೊಯ್ಯುವಳು|

ಮಲಗೆನ್ನ ಮಗುವೆ,
ನಾ ಲಾಲಿ ಹಾಡುವೆ.
ಲಾಲಿ ಜೊ ಜೊ ಲಾಲಿ||ಪ||

ಗೆಜ್ಜೆಕಾಲು ಕುಣಿದು ಸುಸ್ತಾಗಿವೆ.
ನೋಟವಾಡಿ ನಯನ ದಣಿದಿವೆ.
ಅಮೃತವ ಹೀರಿದ ಅಧರಗಳು
ವಿಶ್ರಾಂತಿಯನ್ನು ಬಯಸಿವೆ.
ಮಲಗೆನ್ನ ಸಿರಿಯೆ, ತಾರೆಗಳ
ದೊರೆಯೆ||೧||

ಪರಿಪೂರ್ಣ ಜೀವನ ನಾಕಂಡೆ.
ತಾಯ್ತನ ಸುಖವ ನಾನುಂಡೆ.
ನಿನ್ನ ಮುಗುಳುನಗೆಯೊಂದೆ
ಹಿಗ್ಗಿನ ಹೊನಲೆಂದು ಮನಗಂಡೆ.
ತೆಕ್ಕೆಯೊಳು ಹಾಯಾಗಿರು ಒಲವಿನ ಗಿಣಿಯೆ||೨||

ನಿನ್ನಿಂದ ಮನೆ ಸಗ್ಗಾಯಿತು,
ಹಗ್ಗಿನ ಹೊನಲು ಹರಿದಾಡಿತು.
ಮನೆಯ ಕೀರ್ತಿ ಕಲಶ ನೀನಾಗು
ಈ ಜಗಕೆ ನೀ ಮಾಡು ಒಳಿತು.
ಮನೆಗೆ ನಂದಾದೀಪ  ಓ ಕಂದ
ನಿನ್ನೀ ರೂಪ||೩||
.... ..... .... .... .... ... ....
..✍ತ್ರಿನೇತ್ರಜ.

ಅನುಬಂಧ

 ಕವನ
ಅನುಬಂಧ
             


ಊರುತಾ ಬೇರುಗಳ
ನನ್ನೆದೆಯ ಅಂತರಾಳಕೆ,
ಚಿಗುರೊಡೆದು ಬೆಳೆಯಲು
ನಿನ್ನ ಹೊಸ ನೂರಾಸೆ;
ಆಸರೆಯಾಗುವೆ ನಾನು,
ಭರವಸೆಯು ನನ್ನ ಮೇಲಿರಲಿ.

ಪ್ರೇಮದಿಂದಲಿ ನೀ ನೀಡಿದ
ಕೈ ಹಿಡಿದಿರುವೆ,ಅಳುಕದಿರು.
ಚಾಚುತ್ತ ಬೆಳೆ ನವಿರಾಗಿ
ಹಚ್ಚ ಹಸಿರಿನ ಕನಸುಗಳ
ಆ ನೀಲಿಯ ಬಾನೆತ್ತರಕೆ;
ನಿನಗೆನ್ನದೆಲ್ಲವೂ ಮೀಸಲಿರಲಿ.

ಸುರಿವ ಮಳೆ ನೀರನು
ಹೀರಿ ಒಡಲಾಳದೊಳು
ಕಾಯ್ದಿರಿಸುವೆ ಎಂದಿಗೂ,
ಬಾಡದಿರು ನೀನು ತೃಷೆಗೆ.
ಅಂಜದಿರು ಗಾಳಿ ರಭಸಕ್ಕೆ
ನಂಬಿಕೆಯು ಭದ್ರವಾಗಿರಲಿ.

ನಿನ್ನ ಹೂವೊಳು ಅರಳಿ
ಫಲಗಳಲಿ ಸಿಹಿರಸವಾಗಿ
ಬೆರೆತು ಒಂದಾಗುವೆನು.
ನನ್ನ ತೋಳಿಗೆ ಬಂದಿಳಿವ
ನಿನ್ನರೂಪಗಳ ಬಚ್ಚಿಡುವೆ;
ಇಂಥ ಕೈಸೇರಿ ನಿನ್ನಂತಾಗಲಿ.
 ... .... .... .... .... ...
✍..ತ್ರಿನೇತ್ರಜ.

ಬಾ ಹೋಗೋಣ ಶಾಲೆಗೆ


         
     ಬಾ ಹೋಗೋಣ ಶಾಲೆಗೆ

'ಅಕ್ಕ ನೋಡೆ ಶಾಲೆದಿರಿಸಲಿ
ಹೇಗೆ ಒನಪಾಗಿ ಹೋರಟಿಹರು!
ಅವರು ನಮ್ಮಯ ಸ್ಥಿತಿ ನೋಡಿ
ಗೇಲಿಯ ಮಾಡಿ ನಕ್ಕಾರು'..?

ಸಂತೈಸಲು ತಮ್ಮನಿಗೆಂದಳು,
'ಅವರತ್ತ ನೀ ನೋಡದಿರು.
ನಮ್ಮ ಭಾಗ್ಯವಿರುವುದಿಷ್ಟೇ,
ತರುವ ಬಾ ಕೆರೆಯ ನೀರು.

ಇವರ ಕಂಡು ಮರುಕಗೊಂಡು
ಬಾಲೆಯರು ಇವರ ತಡೆದರು.
'ಶಾಲೆಬಿಟ್ಟು ಎತ್ತ ಹೊರಟಿರಿ'?
ಎಂದವರನು ಕೇಳಿದರು.

ಅಕ್ಕ ತಮ್ಮ ಮುಖನೋಡಿಕೊಂಡು
ಬೇಸರದಿಂದಲೆ ನುಡಿದರು.
'ಶಾಲೆಗೆ ಎಂದೂ ಹೋಗೇ ಇಲ್ಲ.
ನಾವು ಕೂಲಿಮಾಡೋ ಬಡವರು'.

ಚಿಂತಿಸದಿರಿ ನಿಮ್ಮವರಿಗೆ
ತಿಳಿಹೇಳ್ವೆವೆಂದರಾ ಬಾಲೆಯರು.
ಶಾಲೆಗಾಗಿ ನಾವು ನೀವು;
ನಿಮ್ಮ ಹಕ್ಕು ಕೊಡೆಸುವೆಂದರು.

ಶಾಲೆಗೆ ಸೇರಿಸುವರೆಂದು ಅರಿತು
ಮಕ್ಕಳು ಸಂತಸಗೊಂಡರು.
ಕೂಲಿ ತೊರೆದು ಶಾಲೆ ಸೇರಿ
ಓದಲು ಉತ್ಸುಕರಾದರು.
..... ...... ...... ...... ..... ...
✍... ತ್ರಿನೇತ್ರಜ.
        ಶಿವಕುಮಾರ. ಹಿರೇಮಠ.


ಕಾಯಕಯೋಗಿ


          ಕಾಯಕಯೋಗಿ
            
ಹಚ್ಚಿದ ದೀಪ
ಹೆಚ್ಚೊತ್ತು ಇರದೆ
ತಿಳಿಗಾಳಿಯನೂ
ತಾ ತಾಳದೆ ಆರಿದೆ.

ಕತ್ತಲೇನಿಲ್ಲ ದೀಪದ
ಕೆಳಗೂ, ಸುತ್ತಲೂ;
ಸ್ಪಷ್ಟ ಬೆಳಕಿದೆಯಲ್ಲಾ
ಅತ್ತ-ಇತ್ತ ಎತ್ತೆತ್ತಲೂ!

ಆದರೂ ಹತ್ತುವೆ
ಮತ್ತೆ ಮತ್ತೆ ಹಚ್ಚಲು.
ಅದು ಬೆಳಗಬೇಕೆಂದು,
ಬೆಳಕನಿನ್ನೂ ಹೆಚ್ಚಿಸಲು.

'ಮೆದು-ಮೇಣದಬತ್ತಿ'
ಎಂಬುದದರ ಹೆಸರು.
ತಲೆ ಇರುವ ನನಗೆ
'ದೀಪದಕಡ್ಡಿ'ಎನ್ನುವರು.

ನನ್ನಂಥವರೆ ನನ್ನ
ಹತ್ತಿಸಿ ಉತ್ತೇಜಿಸಿದ್ದು.
ನನ್ನವರ ಕೊಡುಗೆಯೇ
ನನಗೆ ಏಣಿಯಾಗಿದ್ದು.

ದೀಪಗಳ ಹಚ್ಚುವುದೇ
ಸದಾ ನನ್ನ ಕಾಯಕ.
ಜ್ಞಾನದ ಬೆಳಕಿಗಾಗಿಯೇ
ಹುಟ್ಟಿ-ಸಾಯ್ವ ಶಿಕ್ಷಕ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

*ಕವಿಭಾವ*


*ಕವಿಭಾವ*
[30/01, 8:55 p.m.]

ಮರಳುತಿಹನದೋ ರವಿ
ಮಾಡಿ ಜಗದ ಯಾತ್ರೆಯ
ಮರಳಿದೆವು ನಾವೂ ಸಹ
ಮುಗಿಸಿ ದೇವರ ಜಾತ್ರೆಯ

ಸೂರ್ಯ ರಂಗು ಹರಡಲು
ನಾಚಿ ನಿಂತಿಹುದು ಬಾನು
ಹೃದಯದೊಳು ಬಂಧಿಸಲು
ಹವಣಿಸುತಿತ್ತು ಬಲೂನು

ಮೆಲ್ಲಗೆ ಆಡಿಹವು ಅಲೆಗಳು
ಗಗನದ ಅಂದವ ಮೆಚ್ಚುತ
ನಮ್ಮ ಹೊತ್ತು ಸಾಗಿದೆ ದೋಣಿ
ಅಲೆಗಳೊಡನೆ ಸರಸವಾಡುತ

ಜಗದಂದವನೆಲ್ಲ ನೋಟದಿ
ಸೂರೆಗೊಂಡೆನೆಂದ ರವಿ
ರವಿ ಕಾಣದುದನೂ ಸಹ
ತಾನು ಕಂಡಿಹೆನೆಂದನು ಕವಿ
✍🏼 ತ್ರಿನೇತ್ರಜ



ಈ ಕ್ಷಣವನು ಬದುಕಿಕೊ

ಕವನ
               
 *ಈ ಕ್ಷಣವನು ಬದುಕಿಕೊ.*

[17/02, 11:32 a.m.]

ಹಣೆಬರಹವನು ಬಲ್ಲವರಿಲ್ಲ
ನಾಳೇನೆಂಬುದ ಕಂಡವರಿಲ್ಲ
ಕಾಣದ ಭವಿತವ
ಚಿಂತಿಸಿ ಚಿಂತಿಸಿ ಇಂದನು
ಸವೆಸುವ ಹುಚ್ಚೇಕೆ?
ನೆಮ್ಮದಿಯಿಂದ ನೆಮ್ಮದಿಗಾಗಿ
ಜಗಕ್ಕೆ ನೆಮ್ಮದಿ ನೀಡಲು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ

ಅವರಿವರೊಂದಿಗೆ ನಿನ್ನ
ಅಳೆಯುವೆಯೇಕೆ
ನೀನು ನೀನೆ ಎಂಬುದ
ಮರೆಯುವೆಯೇಕೆ
ಮರುಳಾಗದಿರು ಪರರ
ಸತ್ತು ಹೊತ್ತೊಯ್ಯದ
ಸ್ವತ್ತು ಆಡಂಬರಕೆ,
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಯೋಚಸಲೇಬೇಕೆಂದರೆ
ದೀನ ದುರ್ಬಲರ ಏಳ್ಗೆಗೆ,
ಖಗ ಮೃಗಗಳ ಬಾಳಿಗೆ
ಹಸಿರು ಸೊರಗಿಹ ಭೂಮಿಗೆ
ಮನಕುಲದ ಉಳಿವಿಗೆ
ನೀನೇನು ಮಾಡಬಲ್ಲೆಯೆಂದು ಯೋಚಿಸು.ಅದಾಗದಿರೆ
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಬದುಕು ಚಿಕ್ಕ ಯಾತ್ರೆ
ಸ್ವಾರ್ಥ ಚಿಂತನೆಗಳ ಬಿಡು
ದುಡಿದು ಉಂಡುಟ್ಟು
ಬದುಕು,ಅದನೆ
ಮಕ್ಕಳಿಗೂ ಕಲಿಸು
ಆತ್ಮ ಸುಡುವ ಚಿಂತೆಯನಟ್ಟಿ
ಪರಮಾತ್ಮನೆಡೆಗೆ ಮನವಿಡು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.
🤘🏼🤘🏼🤘🏼🤘🏼🤘🏼🤘🏼🤘🏼🤘🏼🤘🏼
✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ

*ಶಿವಾರಾಧನೆ*

*ಶಿವಾರಾಧನೆ*
[13/02, 3:06 p.m.]
       
ಜಟಾಧಾರಿ ನೀಲಕಂಠ
ಜಯ ಜಯ ಶಿವ ಶಂಕರ
ಕೈಲಾಸಪ್ರಿಯ ಜಯ ತ್ರಿನೇಶ್ವರ
ಪಾಪಹರ ಕರುಣಾಕರ

ಅಭಿಷೇಕ ಪ್ರಿಯ ನಂದಿಸವಾರ
ಕರುಣಾಸಾಗರ ತ್ರಿಶೂಲ ಧರ
ಬಿಲ್ವಾರ್ಪಣೆಗೆ ಸಂತಸಪಡುವ
ನಿರಾಡಂಬರ ನಾಗಧರ ||೧||

ರುದ್ರಾಕ್ಷಿ ಪ್ರಿಯ ಗಜಚರ್ಮಾಂಬರ
ಧ್ಯಾನ ಪ್ರೀಯ ಗೌರೀವರ
ಢೀಂಢೀಂ ಡಮರುಗ ನಾದಪ್ರಿಯ
ಶ್ರೀ ಚಂದ್ರಮೌಳಿ ಘೃಷ್ಣೇಶ್ವರ ||೨||

ಸಾಂಬಸದಾಶಿವ ಶಂಭೋ ಹರಹರ
ಮಹಾದೇವ ಪ್ರಳಯಾಂತಕರ
ಸರ್ವಾಭಿಷ್ಟವನೀಡೇರಿಸುವವ
ಮೃತ್ಯುಂಜಯ ಅಭಯಂಕರ ||೩||

ಲಿಂಗ ರೂಪಧರ ಓಂಕಾರೇಶ್ವರ
ಮಹಾರುದ್ರ ಜಗದೀಶ್ವರ
ಬಕುತಿಗೆ ಒಲಿವ ಬಸ್ಮಧರ
ಪಾರ್ವತಿ ಪತಿ ಗಂಗಾಧರ ||೪||
🕉🕉🕉🕉🕉🕉🕉🕉🕉
✍🏼.. ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

*ಚಂದದ ಮೂನು*

*ಚಂದದ ಮೂನು*
[01/02, 6:46 p.m.]
🌔🌓🌒🌑🌘🌗🌖🌕
ಜನವರಿ ಮೂವತ್ತೊಂದು
ಹದಿನೆಂಟನೆ ಇಸ್ವಿಯಂದು

ನಭ ನೀಡಿ ವಿಸ್ಮಯವನು
ತಂತು ಚಂದ್ರ ಗ್ರಹಣವನು

ಚಂದ್ರಂಗಂದು ಗ್ರಸ್ತೋದಯ
ನಾಲ್ಕು ರಾಶಿಗೆ ಕೊಂಚ ಭಯ

ಗಗನದಿ ಕಾಣುತ ಬ್ಲಡ್ಮೂನು
ಬಲು ಚಕಿತಗೊಂಡೆನು ನಾನು

ಮಾಸದಿ ದ್ವಿ ಹುಣ್ಣಿಮೆ ಈಸಾರಿ
ಬ್ಲೂಮೂನ್ಗೆ ಆದೆ ನಾ ಆಭಾರಿ

ತೋರಿ ಜಗಕೆ ಸೂಪರ್ ಮೂನು
ಎಲ್ಲರ ಗಮನ ಸೆಳೆಯಿತು ಬಾನು


✍🏼 ತ್ರಿನೇತ್ರಜ

ಶಿವಕುಮಾರ.ಹಿರೇಮಠ

*ರವಿ ಸ್ತುತಿ*

ಭಕ್ತಿ ಗೀತೆ
[25/01, 9:59 a.m.]
 🌞🌞 *ರವಿ ಸ್ತುತಿ* 🌞🌞
ಭಾಗ್ಯವ ನೀಡೋ ಭಾಸ್ಕರ
ದಿನಕರ
ಶಕ್ತಿಯ ಆಕರ ಪ್ರಭಾಕರ ||ಪ||

ಸಂದ್ಯಾ ಛಾಯೆಯ ಅನುರೂಪದವರ
ಅಂಧಕಾರವ ಕಳೆಯುವ ನೇಸರ
ಹನುಮಗೆ ಗುರುವಾದ ಕರುಣಾಸಾಗರ
ಮೂಡಿಸೋ ಎನ್ನಲಿ ಜ್ಞಾನದ ಸಾಕಾರ ||೧||

ಯಮ ಯಮಿ ಶನಿಗೆ ಜನುಮದಾತನೆ
ಅಶ್ವಿನಿ ಕುಮಾರರ ಸೃಜಿಸಿದವನೆ
ಸಪ್ತಾಶ್ವದ ರಥಾರೂಢ ಪ್ರಖರನೆ
ಬಾಳನು ಬೆಳಗು ಬಾ ಆದಿತ್ಯನೇ||೨||
☀☀☀☀☀☀☀☀☀
✍🏼 ತ್ರಿನೇತ್ರಜ್

*ಕಾಲನಿಗೆ ಮನವಿ*

*ಕಾಲನಿಗೆ ಮನವಿ*
[23/01, 8:18 p.m.]

ಓಡು ಓಡು ಓಡು
ಓ ಸಮಯವೇ
ನಿಲ್ಲದಿರು ಎಂದಿಗೂ
ನಿನ್ನೊಡನೆ ಬರುವೆ

ಏನೇ ಆಗಲಿ ನೀ
ಚಲಿಸದಿರು ಹಿಂದೆ
ಕಾಲನ ನಿಯಮವ
ಮರಿಬೇಡ ಮೌನದೆ

ಮೇಲೇರುತ ಇರು
ನೀ ಎಂದಿನಂತೆಯೆ
ನಾನೂ ಮೇಲೆರುವೆ
ನೋಡು ನಿನ್ನಂತೆಯೆ

ಒಮ್ಮೆ ನೀ ಕೆಳಗಿಳಿದರೆ
ಈ ಲೊಕಕೆಲ್ಲಾ ಫಜೀತಿ
ನನ್ನ ಪಾಡಂತೂ ಅಷ್ಟೇ
ಇನ್ನೇನು ದೇವರೇ ಗತಿ!

✍🏼.. ತ್ರಿನೇತ್ರಜ್

Sunday 11 February 2018

ನಾ ನೀನಾಗೆನಾ?

ನಾ ನೀನಾಗೆನಾ?
----------------

ನಿದ್ರೆಯಿಂದೆದ್ದ ನನ್ನ
ಮುದ್ದು ಕಂದ.
ಆಕಳಿಸುತಿರೆ ನೀ
ನೋಡಲೆಷ್ಟು ಚಂದ!

ತಿಳಿಗುಲಾಬಿ ನಿನ್ನೀ
ನಾಜೂಕು ಅಧರಕೆ,
ಅಮೃತಧಾರೆ ನೀಡಲು
ಕಾತರವೆನ್ನ ಮನಕೆ.

ಕುಡಿಹುಬ್ಬಿನಲೋ
ಬಿಲ್ಲೊಂದು ಬಾಗಿದೆ.
ಬಾಯ್ತೆರೆದುದ ನೋಡೆ
ಕೃಷ್ಣನನ್ನು ನೆನಪಿಸಿದೆ.

ಅಕ್ಷಿಗಳೋ ಕಮಲ,
ನಾಸಿಕವು ಸಂಪಿಗೆ
ಬೆಳ್ಮೋಡ ಸವರಿಹ
ಚಂದ್ರನಂದದಿ ಮುಖ.

ನಿನ್ನೊಡನೆ ಬೇಗನೆ
ಮಾತಾಡುವ ಬಯಕೆ.
ಹೆಜ್ಜೆಗಳಿಟ್ಟು ಓಡು ಬಾ
ಬರುವೆನು ಹಿಡಿಯೋಕೆ.

ನಿಷ್ಕಲ್ಮಶ ಮೊಗದಲಿ
ಮಗ್ದತೆಯು ಮಿನುಗಿದೆ.
ನಿನ್ನಂತೆ ನಾನಾಗೆನೆಂದು
ನೆನೆನೆನೆದು ಮರುಗಿದೆ.
  ..... .... ... ..... ....
✍ತ್ರಿನೇತ್ರಜ

    ಶಿವಕುಮಾರ. ಹಿರೇಮಠ.