Tuesday 28 November 2017



ಶಿವರೋದನ
 -- -- -- -- -- --
ನಿರಾಡಂಬರನ ಮೆಚ್ಚಿ ವರಿಸಿದ್ದ
ಅರ್ಧಾಂಗಿನಿ, ನನ್ನ ಹೃದ್ಯಮಣಿ.
ದುರುಳಪಿತನ ಯಜ್ಞಕುಂಡಕೆ.
ಧುಮುಕಿದ ಸತಿ ದಾಕ್ಷಾಯಿಣಿ.

ಹರಡಿಹುದು ಅಗ್ನಿಜ್ವಾಲೆಯು
ಇದೋ ನನ್ನಯ ಹೃದಯಕೆ.
ತಂಪನೆರೆಯಲಾರದೆ ಸೋತಿತು
ಮಂದ ಮಾರುತವೂ ಮನಕೆ.

ಅಲೆಯುತಿಹೆನು ಬುವಿಯುದ್ದಕು
ದಾರಿಯದೇಕೋ ಸಾಗದಾಯ್ತು.
ಏಕಾಂತವನ್ನರಸಿ ಹೊರಟಿಹೆನು
ವಿರಾಮವೇ ಬೇಡದಂತಾಯ್ತು.

ಲೋಕ ಕೈಂಕರ್ಯ ನನಗೆ ಸಾಕು;
ಶೂನ್ಯನಾದೆ ಭಾವನೆಗಳು ಕಮರಿ.
ಗಿಡ,ಮರ-ಬಳ್ಳಿ ,ಗಿರಿ-ಕಂದರಗಳೆ
ಎನಗೆನ್ನ ಪ್ರೀಯಸತಿಯ ತೋರಿರಿ.
--------------------------
✍..ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

Monday 20 November 2017

ಅಕ್ಕಮಹಾದೇವಿ ಕುರಿತು ಕವನ


       

                  ಉಡುತಡಿಯ ದೀಪ್ತಿ

                  ------------------------

ಅಂಗದ ಭಂಗವ ಗೆದ್ದ ಅಕ್ಕಮಹಾದೇವಿ,
ಸಿರಿಗನ್ನಡಕ್ಕುಣಿಸಿದೆ ವಚನಾಮೃತದ ಸವಿ.

ಉಡುತಡಿಯಲ್ಲುದಯಿಸಿದ ಸದ್ಗುಣ ಶೀಲೆ.
ಓಂಕಾರಶೆಟ್ಟಿ-ಲಿಂಗಮ್ಮರ ಪ್ರೀತಿಯ ಬಾಲೆ.

ವಚನ ಭಂಗಕೆ ಕೌಶಿಕನ ಅರಮನೆ ತೊರೆದೆ.
ಸ್ತ್ರೀ ಸ್ವಾತಂತ್ರ್ಯಕೆ ಅಂದೇ ಮನ್ನುಡಿ ಬರೆದೆ.

ಮಾಯೆ ಮುಟ್ಟದ ದೀಪ್ತಿ ಹಾಗೆ ದಿಗಂಬರೆ.
ಕಾಮ ಕೆಡಿಸದ ವಿರಕ್ತಳು ನೀ ಕೇಶಾಂಬರೆ.

ಶಿವಾನುಭವದಲಿ ಜೀವದ ಭಂಗವ ಗೆದ್ದೆ.
ಅನುಭವಮಂಟಪದಲಿ ಸತ್ವಪರೀಕ್ಷೆ ಗೆದ್ದೆ.

ಶ್ರೀಚೆನ್ನಮಲ್ಲಿಕಾರ್ಜುನನೇ ಪತಿ ಎಂದಾಕೆ
ಕಡಿದು ತೇದರು ಕಂಪುಬಿಡದ ಚಂದನಚಕ್ಕೆ.

ನಿಂದಕರಿಗಳುಕದೆ ಮುನ್ನಡೆದ ಛಲಗಾರ್ತಿ
ಕರುನಾಡಿನ ಮೊಟ್ಟ ಮೊದಲ ವಚನಗಾರ್ತಿ

ಭಾವಶುದ್ಧಿಯಲಿ ಕರಗಲು ನಿನ್ನಯ ತನುಮನ
ನಿನ್ನಲ್ಲಿ ಕರಸ್ಥಲಗೊಂಡ ಚೆನ್ನಮಲ್ಲಿಕಾರ್ಜುನ
..... ..... ..... ..... ..... ..... ..... ..... ..... .....
✍...ತ್ರಿನೇತ್ರಜ.
    ಶಿವಕುಮಾರ.ಹಿರೇಮಠ.9945915780

Sunday 19 November 2017

ಕವನ " ಸತ್ಯ ದರ್ಶನ".


       ಸತ್ಯ ದರ್ಶನ

ನದಿದಡದಲಿ ಆಲಯದೆದುರು
ಅರಳಿಹ ಪಾರಿಜಾತ ನಾ.
ದೂರದಲಿ ಕಾಣುವ ಬೆಟ್ಟದ
ಅಂದಕೆ ಮರುಳಾಗಿಹೆ ನಾ.
ಅಲ್ಲಿಗೆನ್ನ ಕರೆದೊಯ್ಯಲು
ಕೇಳಿದೆ ವಾಯುವನು.
ಒಪ್ಪಿದ ಅವನಿಗೆ ಸವರಿದೆ
ನನ್ನ ಸುಗಂಧವನು.
ಗಾಳಿಯನೇರಿ ಸಾಗಿದೆ ನಾನು
ಬೆಟ್ಟದಾ ಬಳಿ ಕಾತುರದೆ.
ಕಲ್ಲು, ಪೊದೆ, ಮುಳ್ಳು, ಮಣ್ಣಿನ
ರಾಶಿ ನೋಡಿ ಅವಾಕ್ಕಾದೆ!!
'ಪವನನನೇ ತಡೆಯುವೆ'
ಎನ್ನುವನು ಆ ಹುಂಬ.
ಚಿಕ್ಕ ಪುಟ್ಟ ಹೂಗಳಿಗೋ
ಇನ್ನಿಲ್ಲದ ಒಣ ಜಂಭ.
ಬಂದ ದಾರಿಗೆ ಸುಂಕವಿಲ್ಲ!
ಮತ್ತೆ ಗಾಳಿಯ ಕೇಳಿದೆ.
'ನದಿ ಮೇಲೆ ಬಿಡು ನನ್ನ
ಆಲಯದ ದಡ ಸೇರುವೆ',                   "ಎಲ್ಲೂ ಇಲ್ಲದ್ದು ಅಲ್ಲೇಇದೆ".         ..... .... ..... .....
ತ್ರಿನೇತ್ರಜ.

ಕವನ 'ಗುರುನಮನ'

ಗುರುನಮನ

ಜ್ಞಾನದ ಕಡಲಲಿ ಈಜಲು ಕಲಿಸಿಹ
ಗುರುದೈವಕೆ ನಮನ.
ಬಾಳಿನದಾರಿಯ ಸುಗಮಗೂಳಿಸಿಹ
ಶಿಕ್ಷಕರಿಗೆ ನಮನ.

ಬೊಧನಾಕುಂಚದಿ ಹಲವು ಬಣ್ಣಗಳ
ಬಳಿದು ನಮ್ಮಯ ಬಾಳಿಗೆ,
ಸುಂದರ ಚಿತ್ತಾರ ಮಾಡಿದಿರೆಮ್ಮನು,
ತೋರಿಸಿದಿರಿ ಈ ಜಗದೆಡೆಗೆ.
ಜ್ಞಾನವ ನೀಡಿ, ಬೆಂಬಲ ತೋರಿ
ಶಿಲೆಯಲಿ ಕಲೆಯ ತುಂಬಿದಿರಿ

ಯಾವ ವೃತ್ತಿಯೂ ಕೈಗೂಡಲಾರದು
ಗುರುವೃತ್ತಿಯು ಕೃಪೆತೋರದಿರೆ.
ಯಾವ ಮನುಜನೂ ಸಾಧಿಸಲಾರನು
ಸುಗಮಕಾರರು ಜೊತೆಗಿರದಿರೆ.
ಹರ ಮುನಿದರೆ ಗುರು ಕಾಯುವರು.
ಶಿಕ್ಷಕ ಭಾಗ್ಯವ ತೋರುವರು.
..... ..... ...... ...... ..... ..... ..... ....
✍ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

Friday 10 November 2017

ಭಾವಗೀತೆ. 'ನಗದಿರು ಚಂದ್ರಮ'

 ಭಾವಗೀತೆ.

       ನಗದಿರು ಚಂದ್ರಮ
🌙✨🌙✨🌙✨🌙
     
ಏಕೆ ನಗುವೆ ನನ್ನ ನೋಡಿ
ತಾರೆಯೊಡನೆ ಚಂದ್ರಮ?
ಅರಿಯದಾಗಿ, ಕೇಳುತಿಹೆನು
ಏಕೆ ನಿನಗೀ ಸಂಭ್ರಮ..?|ಪ|

ಏಕೋ ನಿನ್ನ ನಗೆಯೊಳಗೆ
ಕುಹಕ ಕಂಡೆ ಈ ದಿನ.
ಶೂಲದಂತೆ ನಾಟುತಿವೆ
ರಜತ ನೋಟದ ಬಾಣ.
ನೊಂದ ಮನಕೆ ನೋವನೀವೆ
ತರವೆ ನಿನ್ನೀ ವರ್ತನ.
ಮೋಡಗಳಲಿ ಮರೆಯಾಗು        
ಬೇಡ ನಿನ್ನ ಸ್ಪಂದನ......|೧|

ನಲ್ಲೆಯ ಮನವ ಅರಿಯದಾದೆ
ಬೇಸರವನು ತಂದೆನಾ.
ಅವಳಿಲ್ಲದೆನಗೇನಿದೇ
ಬೇಸರವೀ ಜೀವನಾ.
ಒಂಟಿತನವು ಮೂಡಿಸಿದೆ
ಎದೆಯಲೇನೋ ತಲ್ಲಣ.
ಮುನಿಸು ಮರೆತು ಬಾರಳೇ
ಕರೆವೆ ಹೇಳಿ ಕಾರಣ......|೨|

✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Monday 6 November 2017

ಕಥನ ಕವನ 'ಬೇಸತ್ತವಳು'

ಕಥನ ಕವನ.

    ಬೇಸತ್ತವಳು
.... ...... ..... .....
ಯಾಕರ ಹೆಣ್ಣುಜಲುಮ
ಕೊಟ್ಟೆಯೋ? ಶಿವನೇ! |
ಸಾಕಪ್ಪಾ ; ನಿನ್ನ ಪಾದಕ
ಸೇರಿಸಿಕೋ  ಬೇಗನೆ ||

ಕಟ್ಟಿಕೊಂಡವ ಕುಡುಕ ಗಂಡ,
ಜೂಜಿನ್ಯಾಗೇ ಮಳುಗೊ ಭಂಡ;
ಇವ್ನ ಚಟಕ ಹೊಲಮನಿ ದಂಡ,
ನಗತಾರ ಜನಾ ಬಾಳೇವ ಕಂಡ ||

ಮುಪ್ಪಾಗ್ಯಾರ ನನ್ನ ಅತ್ತಿ-ಮಾವ,
ಅವರಿಗಂತ ನಾ ಹಿಡದೀನಿ ಜೀವ;
ಸೋಮಾರಿಗಂಡ ದುಡಿಲಾರದವ,
ಯಾರಿಗಿ ಹೇಳಲಿ ನನ್ನ ನೋವ ||

ಬೆನ್ಹಿಂದ ಬಂಜಿ ಅನ್ನತಾರ ಜನ,
ವಾರಿಗೇರು ನಕ್ಕು ತೆಗಿತಾರ ಮಾನ;
ಆದರೂ ಎಲ್ಲಾ ಸಹಿಸಿಕೋತೇನ,
ಬಡ್ತನಕ ಮಕ್ಳು ಬ್ಯಾಡೋ ಶಿವನ ||

ಆಗ ಕಲಿಲಿಲ್ಲ ನಾನೂ ನಾಲ್ಕಕ್ಷರ.
ಈಗ ಅರಿವಾತು; ಬಾಳೇ ಬೇಸರ.
ಮುಂದಿನ ಜನ್ಮ ಅಂತ ಇದ್ದರ
ಹೆಣ್ಣಾಗಿ ಹುಟ್ಟಿಸಬ್ಯಾಡೊ ಹರ ||

✍.. ತ್ರಿನೇತ್ರಜ.    
              ಶಿವಕುಮಾರ.ಹಿರೇಮಠ.

*ಕಥನ ಕವನ ಸ್ಪರ್ಧೆ -ದಿ||೩/೧೧/೨೦೧೭ ರ ಫಲಿತಾಂಶ*
%$%$%$%$%$%$%$%$%$%$%$
*ಪ್ರಥಮ ಸ್ಥಾನ:-*ತ್ರಿನೇತ್ರಜ.(ಬೇಸತ್ತವಳು).
@-ತ್ರಿನೇತ್ರಜರವರು ಕಥನವನ್ನು ಚೆನ್ನಾಗಿ ಹೆಣೆದಿದ್ದಾರೆ.ಪ್ರಾಸಗಳನ್ನು ಸಂದರ್ಭೋಚಿತವಾಗಿ ಹೊಂದಿಸಿದ್ದಾರೆ.ಪ್ರಾಸವು ಕಥನ ಕವನಕ್ಕೆ ಮೆರುಗು ನೀಡುತ್ತವೆ ಜೊತೆಗೆ ಕುಟುಂಬದ ಬವಣೆಯನ್ನು ವಿವರಿಸುವುದರೊಂದಿಗೆ ಹೆಣ್ಣಿಗೆ ಶಿಕ್ಷಣದ ಮಹತ್ವವನ್ನುಸಾರಿದ್ದಾರೆ ಹೀಗಾಗಿ ಅದು ಓದುಗರ ಮನಸ್ಸಿಗೆ ಹಿಡಿಸುತ್ತದೆ ಎಂದು ನನ್ನ ಅನಿಸಿಕೆ.

*ದ್ವಿತೀಯ ಸ್ಥಾನ:-*ಗಿರಿಜಾ ಇಟಗಿ.(ಜೀವನ್ಮುಕ್ತಿ)
@-ಗಿರಿಜಾ ಇಟಗಿಯವರು ಕೂಡ ಕಥನವನ್ನು ಮನಮುಟ್ಟುವಂತೆ,ಪ್ರಾಸಬದ್ಧವಾಗಿ ಮತ್ತು ಕೆಲವೊಂದು ಹಿತನುಡಿಯಂತಹ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿದ್ದಾರೆ.ಉತ್ತಮ ಪ್ರಯತ್ನ.

*ತೃತೀಯ ಸ್ಥಾನ:-*ಡಾ|| ಸುರೇಶ ನೆಳಗುಳಿ.(ಸೋಮಾರಿ ಮಗನ ಕಥೆ-ವ್ಯಥೆ).
@-ಡಾ.ಸುರೇಶ ನೆಳಗುಳಿಯವರು ಸಂಕಷ್ಟ ಕುಟುಂಬದ ಎಲ್ಲ ಆಯಾಮಗಳನ್ನು ಪರಿಚಯಿಸಿದ್ದಾರೆ ಹಾಗೂ ಕವನವನ್ನು ಓದಿಸಿಕೊಂಡು ಹೋಗುವಂತೆ ರಚಿಸಿದ್ದಾರೆ.
:::::::::::;::::::::::::::::;;;;;;:::::;:;:;;;;;;;;;;;;;;;;;
*ಮನದ ಮಾತು*
ಈ ಬಾರಿ ಕಥನ ಕವನಕ್ಕೆ ೮ ಕವನಗಳು ಬಂದಿದ್ದು ಎಲ್ಲಾ ಕವನಗಳನ್ನು ನಮ್ಮ ಕವಿಗಳು ಮತ್ತು ಕವಯಿತ್ರಿಯರು ಬಹಳ ಚನ್ನಾಗಿ ನಾ ಮೇಲು ತಾ ಮೇಲು ಎನ್ನುವಂತೆ ರಚಿಸಿದ್ದಾರೆ.ಹಿಂದಿನ ಸ್ಪರ್ಧೆಯ ಕಥನ ಕವನಗಳಿಗಿಂತ ಈ ಬಾರಿಯ ಕವನಗಳು ಮಾತ್ರ ಪ್ರಶಂಶನೀಯವಾಗಿವೆ,ಹೀಗಾಗಿ ನಿರ್ಣಯ ಮಾಡಲು ನನಗೆ ಬಹಳ ಕಷ್ಟವಾಯಿತು.ಎಲ್ಲ ಕವನಗಳು ಆಯ್ಕೆಯ ಕವನಗಳೇ ಆದರೆ ಸ್ಪರ್ಧಾ ದೃಷ್ಟಿಯಿಂದ ಕೆಲವು ಮಾನದಂಡಗಳನ್ನು ಉಪಯೋಗಿಸಿ ಆಯ್ಕೆ ಮಾಡಿರುವೆ.
..................‌..
* ಪಿ.ಎಸ್.ಮಳಗಿ.
  ತಾವರಗೇರಾ.
  ನಿರ್ಣಾಯಕರು.

Friday 3 November 2017

ನ್ಯಾನೊ ಕಥೆ ' ಭಗ್ನ ಕನಸು '


                                     
   ಭಗ್ನ ಕನಸು
.....  .....  .....  ....    

      ಹನ್ನೆರಡರ ಆ ಬಾಲೆ ಗೌರಿಯನ್ನು ಅವಳ ತಾಯಿ ಶಾಲೆ ಬಿಡಿಸಿ ಎಮ್ಮೆ ಮೇಯಿಸಲು ಕಳುಹಿಸಿದ್ದಳು. ಅದಕ್ಕೆ ಕಾರಣ ಎರಡು ತಿಂಗಳ ಹಿಂದೆ ಸಂಭವಿಸಿದ್ದ ಅವಳ ತಂದೆಯ ಆಕಸ್ಮಿಕ ಮರಣ.
       ರಸ್ತೆ ಬದಿಗೆ ಎಮ್ಮೆಯನ್ನು ತರುತ್ತಿದ್ದಂತೆ ಖಾಸಗಿ ಶಾಲಾ ವಾಹನವು ಹಾರ್ನ ಮಾಡುತ್ತ ಹೋಯಿತು. ಅದರಲ್ಲಿದ್ದ ಮಕ್ಕಳು ಗೌರಿಯನ್ನು ನೋಡಿ ಕೈ ಬೀಸಿದರು. ಪರಿಚಯದ ನಗೆಸೂಸಿ ಇವಳೂ ಕೈ ಬೀಸಿದಳು. ಕಣ್ಣಂಚಲ್ಲಿ ಮಾತ್ರ ನೀರು ತುಂಬಿತ್ತು. ಹಿಂದಿನ ವರ್ಷ ತಾನು ಐದನೇ ತರಗತಿಯಲ್ಲಿದ್ದಾಗಿನ ನೆನಪು ಕಣ್ಮುಂದೆ ಸುಳಿಯಿತು.
          ಆಗ ಗೌರಿಗೆ ಹನ್ನೋಂದು ವರ್ಷ. 'ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ' ಯ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಗೌರಿಗೆ ಪ್ರಥಮ ಸ್ಥಾನ. ಅಲ್ಲಿ ಇದ್ದ ಆ ಖಾಸಗಿ ಶಾಲೆಯ ಮೂವರು ಮಕ್ಕಳು ಗೌರಿಯ ಸ್ಪಷ್ಟ ಉಚ್ಚಾರಣೆಗೆ ಅಚ್ಚರಿಯಿಂದ ಮೆಚ್ಚುಗೆ ಸೂಚಿಸಿದ್ದರು. ಅವರೇ ಈಗ ಗೌರಿಗೆ ಕೈ ಬೀಸಿದ್ದು.
       ಚೆನ್ನಾಗಿ ಓದಿ ಮುಂದೆ ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಬೇಕೆಂದು ತಾನು ಕನಸು ಕಂಡಿದ್ದು ಭಗ್ನಗೂಂಡಿತ್ತು.ಇವಳ ತಾಯಿಯ ಮನವಲಿಸಲು ಮಾಡಿದ ಶಿಕ್ಷಕರ ಯತ್ನ ವಿಫಲವಾಗಿತ್ತು. ಅವನ್ನೆಲ್ಲ ಈಗ ನೆನೆದು ಅವಳ ಕಣ್ಣು ಮಂಜಾದವು. ಅವಳಿಗರಿವಿಲ್ಲದೇ ಕಂಬನಿಗಳು ಕೆನ್ನೆಮೇಲೆ ದಾರಿಮಾಡಿದವು.
     'ಏ.. ಗೌರೀ...ನಿನ್ ಎಮ್ಮಿ ಬದು ದಾಟಿ ಒಳಗ ಬಂದ ಬೆಳಿ ಮೇಯಾಕ್ಹತ್ತೈತಿ ಹೊಡಕೊ ಬಾ..' ಎಂದ ಶಾಂತವ್ವನ ಧ್ವನಿ ಕೇಳಿದ   ಗೌರಿ 'ಬಂದ್ನಿ ರೀ..' ಎಂದು ದೌಡಾಯಿಸಿದಳು.
..... ..... .... .... ......
  ✍..ತ್ರಿನೇತ್ರಜ.
  ಶಿವಕುಮಾರ.ಹಿರೇಮಠ.

Thursday 2 November 2017

ಕವನ 'ಕಾಲಚಕ್ರದೊಳು'


ಕಾಲಚಕ್ರದೊಳು 

..... ..... ..... .....
ಕಾಲ ಕೆಟ್ಟ್ಹೋಯಿತೋ ತ್ರಿನೇತ್ರಜ
ಕಾಲಚಕ್ರದಲಿ ಅಧರ್ಮವತೋರಿ
ತಲೆಕೆಳಗಾಗಿ ಬಾಳುತಿರುವೆವೊ.

ಧನಸಂಗ್ರಹದ ದಾಹಿಗಳಾಗಿ,
ನ್ಯಾಯ ನೀತಿಯ ಮರೆತವರಾಗಿ,
ಮೇಲೇರುವವರ ಕಾಲೆಳವರಾಗಿ,
ಸ್ವಾರ್ಥ ಸಾಧನೆಗಳಿಗೆ ನಾವು
ತಲೆಕೆಳಗಾಗಿ ಬಾಳುತಿರುವೆವು.

ಹಾರ ತುರಾಯಿಗೆ ಸೋತವರಾಗಿ,
ಬಹುಪರಾಕಿನ ಭಟ್ಟಂಗಿಗಳಾಗಿ,
ನೇರ ನುಡಿಗಾರರ ದೂಷಿಪರಾಗಿ,
ಎಲ್ಲಬಲ್ಲೆವೆಂಬ ಅಹಂಕಾರದಲಿ
ತಲೆಕೆಳಗಾಗಿ ಬಾಳುತಿರುವೆವು.

ತಿರುಗುವ ಚಕ್ರ ನಿಲ್ಲದೋ ಮನುಜ
ಮೇಲ್ಬಂದಾಗ ಧರ್ಮ, ಮಾಡಿದ
ಕರ್ಮಫಲ ಅನುಭವಿಸುವೆವೊ.
.... .... .... .... ....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

Wednesday 1 November 2017

ಲೇಖನ 'ಮುರಿದು ಹೋದ ಪ್ರೀತಿ ಹೂತ್ತು ತರುವ ನೆನಪುಗಳು'

    ಮುರಿದು ಹೋದ ಪ್ರೀತಿ ಹೂತ್ತು 
             ತರುವ ನೆನಪುಗಳು .
...............     ............     ..........   ........

         

         ನಿಜ; ಪ್ರೀತಿ ಕುರುಡು.ಆದರೆ ಕಣ್ಣಿರದೆ ಇದ್ದರೇನಂತೆ ಹೃದಯವಿದೆಯಲ್ಲ ಇದಕ್ಕೆ!ಅಷ್ಟು ಸಾಕು.ಪುಟ್ಟ ಎದೆಗೂಡಿನ ತುಂಬಾ ನೂರಾರು ಬಣ್ಣದ ಕನಸುಗಳನ್ನು ತುಂಬಿಬಿಡುತ್ತದೆ. ಒಂದೊಮ್ಮೆ ಆ ಬಂಧನ ಮುರಿದರೂ, ಆ ನೆನಪುಗಳು ಮಾತ್ರ ಹಸಿಗೋಡೆಯಲ್ಲಿ ನೆಟ್ಟ ಹರಳಿನಂತೆ ಹಾಗೇ ಉಳಿಯುತ್ತವೆ. 
       ಈ ಪ್ರೀತಿಯೇ ಹೀಗೆ. ಬರುವಾಗ ಹೇಳದು,ಮಾತೂ ಕೇಳದು; ಹೋಗುವಾಗ ಮನಸ್ಸಿಗೆ ಘಾಸಿ ಮಾಡಿ ಹೋಗುವುದು. ಇಷ್ಟೇ ಆದರೆ ಅಡ್ಡಿಯಿಲ್ಲ. ಒಮ್ಮೊಮ್ಮೆ ದ್ವೇಷದ ಬೀಜ ಬಿತ್ತಿಬಿಡುವುದು.ಫಲ ಮಾತ್ರ ಕಾರ್ಕೂಟಕ ವಿಷ. ನೆಮ್ಮದಿಯನ್ನೇ ಕಸಿಯುವ ಹೃದಯದ ಕಸವಾಗುತ್ತದೆ.
        ಮುರಿದು ಹೋದ ಪ್ರೀತಿಯ ಪ್ರಭಾವ ಅಷ್ಟಿಷ್ಟಲ್ಲ. ಏಕಾಂಗಿಯಾದಾಗ, ಅಭದ್ರತೆ   ಕಾಡಿದಾಗ, ಅತೃಪವಾದಾಗ, ಪುನರ್ ಭೇಟಿಯಾದಾಗ,ಆ ಸ್ಥಳಕ್ಕೆ ಹೋದಾಗ, ಮತ್ತೆ ವಸಂತ ಬಂದಾಗ,ಮಾಗಿಯ ಚಳಿಯಾದಾಗ...ಕಸದ ಲಾರಿಯಂತೆ ಬೇಡವಾದ,ಹಳತಾದ,ಕೊಳೆತ ಹಳೆಯ ನೆನಪುಗಳ ರಾಶಿಯನ್ನು ಮನದ ಸ್ಮೃತಿಗೆ
ಹೊತ್ತು ತರುತ್ತದೆ. ಕೆಲವರಿಗೆ ಮುದ,ಮತ್ತೆ ಹಲವರಿಗೆ ನೋವು ತುಂಬಿಬಿಡುತ್ತದೆ.
      ಗುಂಡಿಗೆ ಗಟ್ಟಿಯಾಗಿದ್ದವರು ಸಹಿಸಿಕೊಳ್ಳುವರು.ಇಲ್ಲದಿದ್ದವರು ಇಹಲೋಕ ತೊರೆದ ಉದಾಹರಣೆಗಳು ಅದೆಷ್ಟೋ.ಬದುಕಿದ್ದರೆ ಪ್ರೀತಿಯ ಹತ್ತು ಹಲವು ಮಜಲುಗಳು ಬಾಳಿನುದ್ದಕೂ ಬಂದೇ ಬರುತ್ತವೆ. ಹೆಣ್ಣು-ಗಂಡಿನ ನಡುವಣ ಪ್ರೀತಿ ಅವುಗಳಲ್ಲಿನ ಒಂದು ಅಧ್ಯಾಯ ಮಾತ್ರ. ಆ ಪ್ರೀತಿ ಸಿಗದಿರೆ ಬದುಕೇಕೆ ಕೊನೆಯಾಗಬೇಕು? ಆ ಪ್ರೀತಿಗಿಂತ ಬದುಕು ಮುಖ್ಯ.
       ಅದೇನೇ ಇರಲಿ ಮುರಿದು ಹೋದ ಪ್ರೀತಿ ಹೊತ್ತು ತರುವ ನೆನಪುಗಳನ್ನು ಹಳೆಯ ಕನಸುಗಳೆಂದು ಭಾವಿಸುವುದೇ ಸೂಕ್ತ. ಬದುಕನ್ನು ಪ್ರೀತಿಸೋಣ.

✍....ತ್ರಿನೇತ್ರಜ್.

 ಶಿವಕುಮಾರ.ಹಿರೇಮಠ.
ಪ್ರೌ.ಶಾ.ಸಹಶಿಕ್ಷಕರು
ಗೌರಿಬಿದನೂರು
  9945915780
shivakumarh13@gmail.com