Friday 27 October 2017

ಕವನ "ದಾರಿ ತೋರುಬಾ ಬೆಳಕೆ"



 ದಾರಿತೋರು ಬಾ  ಬೆಳಕೆ

ಕವಿಯುತಿಹ ಕತ್ತಲೆಯು
ಕಣ್ಣ ಕುರುಡಾಗಿಸಿಹುದು
ನನ್ನನ್ನು ಭಯಪಡಿಸುತಲಿ.
ದಣಿದ ರವಿಯದೋ
ಅತ್ತ ಮರೆಯಾಗುತಿಹನು
ವಿರಾಮವನು ಬಯಸುತಲಿ.

ಹರೆಯದ ಮರುಳ ಮಬ್ಬು
ಮೈದುಂಬಿರಲು, ರಾತ್ರಿಯ
ಆತಂಕ ನನ್ನಾವರಿಸುತ್ತಿದೆ.
ಸಂಸ್ಕಾರದ ನಂದಾದೀಪವೇ,
ಇರುಳೆಲ್ಲಾ ನೀನುರಿಯುತ
ಬೆಳಕೆನಗೆ ತೋರಬೇಕಿದೆ.

ನನ್ನ ಪುಟ್ಟ ಮನೆಯೊಳು,
ಮುಗುದತೆಯ ಹೊಸಕಲು
ನಿಶೆಯ ನಶೆ ನುಸುಳಬಹುದು.
ನಿನ್ನಯ ಸಾಂಗತ್ಯವಿರಲು
ನನಗದೆಷ್ಟೋ ನೆಮ್ಮದಿಯು,
ನಾ ಸುಖನಿದ್ರೆಗೈಯಬಹದು.

ನನ್ನ ಜೊತೆಯಾಗಿರು ಸಾಕು,
ನಿನ್ನನ್ನೇ ನಾ ನಂಬಿಹೆನು.
ನೀನಿರದೆ ನಾನು ಬದುಕೆ.
ಅಂಧಕಾರವನು ಅಳಿಸಿ,
ನೆಮ್ಮದಿಯನು ಕರುಣಿಸಿ,
ದಾರಿತೋರು ಬಾ ಬೆಳಕೆ.
  ..... ..... ..... ..... .....
✍  ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

No comments:

Post a Comment