Tuesday 31 October 2017

ಕವನ 'ಪ್ರಾಪ್ತೆಯ ಅಂತ್ಯೋಕ್ತಿ'


ಪ್ರಾಪ್ತೆಯ ಅಂತ್ಯೋಕ್ತಿ 


ಎದೆಯೂಳು ಬೆಂಕಿಯ ಕಡಲು;
ಉರಿಯೊಳು ಬೆಂದಿದೆ ಒಡಲು.
ಬಾಳುವ ಬಯಕೆ ಇನ್ನೆಲ್ಲಿ? 
ಹರೆಯದ ಕನಸು ಹರಿದಿರಲು;
ದುರುಳರು ದುಃಸ್ವಪ್ನ ರಾಚಿರಲು
ಕಾಣಲೇನುಳಿದಿಲ್ಲ ಜೀವನದಲ್ಲಿ. 

ವಾಂಛೆಗಳಿಗೆ ಮನ ಜಾರಿತ್ತು.
ನಂಬಿಕೆಯೇ ಮೋಸಗೈದಿತ್ತು.
ಮಾಸದ ಗಾಯ ಹೃದಯದಲ್ಲಿ.
ಇದೋ ವಿದಾಯ ಪರ್ವತವೇ,
ಧನ್ಯವಾದಗಳು ಪವನವೇ,
ಹರಸಿ; ಪ್ರಾಪ್ತೆಯ ಅಂತ್ಯದಲ್ಲಿ.

ಬಾಡಿ ಬರಡಾಗಿಹೆನು ನಾನು.
ಮಲಗಲು ಬರುತಿರುವೆನು
ಚಿರನಿದ್ರೆಗೆ ನಿನ್ನ ಭೂಮಡಿಲಲ್ಲಿ.
ಎದೆಗಪ್ಪಿಕೊಂಡು ಸಂತೈಸು;
ಮುಕುತಿಯನ್ನು ಕರುಣಿಸು.
ಹುದುಗಿಸೆನ್ನನು ನಿನ್ನೆದೆಯಲ್ಲಿ.
     .....     ......    .....
ತ್ರಿನೇತ್ರಜ.
ಶಿವಕುಮಾರ.ಹಿರೇಮಠ.


No comments:

Post a Comment