Monday 19 February 2018

*ಗಮನೆ *

*ಗಮನೆ *
          
[09/02, 11:09 a.m.]
     
ತಾಳದೆ,ತೋಳಲಾಡಿದೆ
ಆಸೆಭರಿತ ಭಾವನೆ
ಕಲ್ಪಿಸಲಾಗದ ಕಲ್ಪನೆ
ಸರಿದೂಗದಾ ಸ್ಪಷ್ಟಣೆ
ಹರೆಯವು ಮೈದುಂಬಿ
ಬಂದೆ ನಾ ದೈವವ ನಂಬಿ

ಜನನಕಾಲದಿಂ ಎದೆಯ ಗೂಡಲಿ
ಮೂಡಿಹುದಿದೊಂದು ಹೆಬ್ಬಯಕೆ
ಅದಮ್ಯವಾದ ಆಸೆಯು ಎದ್ದಿದೆ
ತಾಳ್ಮೆಯೆ ಬೇಡ ಈ ಮನಕೆ
ಈಡೇರುವುದೆಂದೋ ನಾ ಕಾಣೆ
ಈ ವೇದನೆಗೆ ಯಾರು ಹೊಣೆ
ನರನಾಡಿಯೊಳೆಲ್ಲ ನುಡಿದಿದೆ
ಝೇಂಕರಿಸುತಾ ರುದ್ರ ವೀಣೆ

ಇಳಿದೆ, ಇಳೆಯ ಸೆರಗಲಾಡಿ
ತೊರೆದೆ ತವರನು ಓಡಿದೆ
ತಂದೆ ಸುರಿದ ಪ್ರೀತಿಯ ಮಳೆಗೆ
ಉಬ್ಬಿದೆ ಹಬ್ಬಿದೆ ತುಳುಕಾಡಿ
ಸೊರಗಿದೆ ಸಣ್ಣಾದೆ
ರವಿಯ ಸುಡುತಾಪಕೆ
ಬೆಂದುಹೋದೆ ಬತ್ತಿಹೋದೆ
ಆಸೆಯ ಮಾತ್ರ ಬಿಡದಾದೆ

ಬೇರುಗಳ ಸವಿ ಹೀರುತ ಬನದಲಿ
ಬಳುಕಿದೆ ಬಂಡೆಗಳ ಸವೆಸುತಲಿ
ಕಾರ್ಗತ್ತಲಲಿ ಬೆಚ್ಚಿದೆ ನಾ ಭಯದಿ
ಅವಡುಗಚ್ಚಿ ಸಾಗಿದೆ ಮೌನದಲಿ
ಹುಡುಕುವೆ ಹೊಸಹಾದಿ
ಹೇಗಿದ್ದರೂ ನಾ ನದಿ
ಸಾಗುತಿರುವೆ ಅರಸಿ ಭರದಿ
ಹುಡುಕಿ ಬೆರೆಯವೇ ಸಾಗರದಿ
*** *** **** **** ****
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

No comments:

Post a Comment