Sunday, 18 March 2018

ಬಾರಯ್ಯಾ ಯುಗಾದಿ ಬಾ

ಕವನ
*ಬಾಯ್ಯಾ ಯುಗಾದಿ ಬಾ*




ನೆನಪಾಯಿತೇನು ಮತ್ತೆ
ಬುವಿಯತ್ತಣದ ಹಾದಿ
ಇಳೆಗೆ ಹಸಿರ ತುಂಬಲು
ಬಂದೆಯಾ ಯುಗಾದಿ

ಗಂಧ ಪೂಸೆ ಬಂದೆಯಾ
ಮಾವು ತೋಪಿನ ತುಂಬ?
ಮಕರಂದವ ಸುರಿದೆಯಾ
ದುಂಬಿಗಳಿಗದೇನು ಜಂಭ!

ವಧುವಾದಳು ಇಳೆಯು
ಶುಭದೊಸಗೆ ಎಂದಳು
ನಿಮ್ಮಾಟಕೆ ಕುಪಿತ ರವಿ
ಉರಿದರೆಮಗೆ ಗೋಳು

ಮುನಿಸಿನಿಂದ ಹಾಗೆಂದೆ
ಇರಲಿ ಬಾ ಇದ್ದದ್ದೆ ಇದೆಲ್ಲ
ನಿನಗಾಗಿಯೇ ಕಾದಿಹೆವು
ಅಭಿಮಾನದಿಂದ ನಾವೆಲ್ಲ

ತಳಿರು ತೋರಣಗಳಿಂದ
ಮನೆಯ ಸಿಂಗರಿಸಿಹೆವು
ಅಭ್ಯಂಜನಗೈದು ನವವಸ್ತ್ರ
ಧರಿಸಿ ಸ್ವಾಗತ ಕೋರಿಹೆವು

ನುಸುಳಿ ಬರಲಿ ಸುಳಿಗಾಳಿ
ಹೊಂಗೆ ನೆರಳಲಿ ತಂಪಾಗಿ
ಸಿಹಿಯುಂಡು ಮಧ್ಯಾಹ್ನ
ನಿದ್ರಿಸುವೆವು ಸೊಂಪಾಗಿ

ಬರದು ಬಾರದು ಬಯಸೆ
ಬರುವುದಂತೂ ತಪ್ಪದು
ಬೇವು ಬೆಲ್ಲ ಸೇರಿದ ಸವಿ
ಬದುಕಿಗೆ ರುಚಿ ತರುವುದು
🌳🌴🌳🌱🌿☘🌳🌴🌳
✍🏼 ತ್ರಿನೇತ್ರಜ್.

No comments:

Post a Comment