Saturday 17 March 2018

ಗುಟ್ಟು ರಟ್ಟಾದಾಗ

ನೀಳ್ಗತೆ ಸ್ಪರ್ಧೆಗೆ

*ಗುಟ್ಟು ರಟ್ಟಾದಾಗ*
    ಬೆಳಿಗ್ಗೆಯೇ ಪಟ್ಟಣಕ್ಕೆ ಬಂದ ರಾಮಣ್ಣ ಮಗಳ ಮನೆ ತಲುಪುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ಕುಡಿಯಲು ಕಾಫಿ ಕೊಟ್ಟ ಮಗಳು ನೇರವಾಗಿ ಕೇಳಿಯೇ ಬಿಟ್ಟಳು 
   "ಏನಪ್ಪಾ , ಈಗ ಬಂದ ವಿಷಯ "
           ಕೊಂಚ ಇರುಸು ಮುರುಸಾದರೂ ಅನಿವಾರ್ಯವಾಗಿದ್ದರಿಂದ ಸಾವರಿಸಿಕೊಂಡ ರಾಮಣ್ಣ ಮೆಲು ಧ್ವನಿಯಲ್ಲೇ ಹೇಳಿದ." ನಿಮ್ಮ ಅಮ್ಮನಿಗೆ ಹುಷಾರಿಲ್ಲಮ್ಮ , ತುರ್ತಾಗಿ ಆಪರೇಷನ್ ಮಾಡಿಸಬೇಕಾಗಿದೆ. ಸ್ವಲ್ಪ ಹಣ ಕಡಿಮೆಯಾಗಿತ್ತು. ಅದಕ್ಕೆ ,ಅಳಿಯಂದಿರ ಹತ್ತಿರ.."
         ಅರ್ಧಕ್ಕೆ ಬಾಯಿ ಹಾಕಿದ ಮಗಳು "ಅಯ್ಯೋ ಅಪ್ಪ! ನಮ್ ಹತ್ರ ಈಗ ಎಲ್ಲಿ ಹಣವಿದೆ? ಅಪ್ಪ ,ನಮ್ಮ ಮನೆ ಆಲ್ಟ್ರೇಷನ್  ಮಾಡಿಸೋದಿದೆ. ನಮಗೇ ನೂರಾರು ತಾಪತ್ರಯಗಳಿವೆ. ಅಲ್ಲದೇ, ಬೀಗರ ಹತ್ತಿರ ಹಣ ಕೇಳಿದರೆ ಏನು ಚೆನ್ನ ನೀನೇ ಯೋಚ್ನೆ ಮಾಡು. ನನ್ನ ಪುಣ್ಯ, ನಮ್ಮ ಯಜಮಾನ್ರು ವರದಕ್ಷಿಣೆ  ಗಿರದಕ್ಷಿಣೆ ಅಂತ ಪೀಡಿಸಿ ನನ್ನ ತವರು ಮನೆಗೆ ದಬ್ಬೋದಿಲ್ಲ.ಹಾಗಂತ ಅವರ ಹತ್ತಿರ ಹಣ ಕೇಳುವುದು ಎಷ್ಟು ಸರಿ"? ಎಂದುಬಿಟ್ಟಳು.
            ರಾಮಣ್ಣನ ಬಾಯಲ್ಲಿ ತೇವ ಆರಿತು. ‍"ಹಾಗೇನಿಲ್ಲ ತಾಯಿ, ಬೇರೆ ಕಡೆಗೂ ಪ್ರಯತ್ನ ಮಾಡಿದ್ದೇನೆ. ಏನೋ, ಒಂದು ಮಾತು ಇರಲಿ ಅಂತ ನಿನ್ನ ಹತ್ತಿರ ಕೇಳಿದೆ ಅಷ್ಟೇ.ಬೇಜಾರಾಗ್ಬೇಡಮ್ಮ" ಎಂದು ಹೇಳಿ ಹೊರಡಲು ಅನುವಾದ.
     "ಇರಪ್ಪ , ಸ್ವಲ್ಪ ತಿಂಡಿ ತಿಂದು ಹೋಗುವಿಯಂತೆ" ಎಂದು ಮಗಳು ಅಡುಗೆ ಮನೆಯತ್ತ ನಡೆದಳು. ತಿಂಡಿಯ ತಟ್ಟೆಯೊಂದಿಗೆ ಹೊರಬರುವಷ್ಟರಲ್ಲಿ ರಾಮಣ್ಣ ಅಲ್ಲಿರಲಿಲ್ಲ.
      "ಸುಕನ್ಯಾ" , ಹೆಸರಿಗೆ ತಕ್ಕಂತೆ ಸುಂದರ ಹೆಣ್ಣಾಗಿದ್ದಳು. ರಾಮಣ್ಣ- ಪುಟ್ಟಮ್ಮ ದಂಪತಿಗಳ ಒಬ್ಬಳೇ ಮಗಳು. ಬಣ್ಣದ ಲ್ಲಾಗಲಿ ಹೋಲಿಕೆ ಯಲ್ಲಾಗಲಿ ಇವಳು ಅವರಿಬ್ಬರಲ್ಲಿ ಯಾರನ್ನೂ ಹೋಲುತ್ತಿರಲಿಲ್ಲ. ರೈತನಾಗಿದ್ದ ರಾಮಣ್ಣನು ಇದ್ದ ಎರಡು ಎಕರೆ ಜಮೀನಿನಲ್ಲಿ  ಒಣ ಬೇಸಾಯ ಮಾಡಿಕೊಂಡು ಬಂದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದನು. ಇದ್ದೂರಲ್ಲಿ ಮಗಳನ್ನು ಶಾಲೆಗೆ ಕಳುಹಿಸಿ, ಓದಲು ಪ್ರೋತ್ಸಾಹ ನೀಡಿದ್ದ. ನಂತರ ಅವಳು ,ಪಟ್ಟಣದ ಕಾಲೇಜಿಗೆ ಸೇರಲು ಬಯಸಿದಾಗ ಪುಟ್ಟಮ್ಮನ ವಿರೋಧವ ಲೆಕ್ಕಿಸದೆ ಅದಕ್ಕೂ ಒಪ್ಪಿದ್ದ. ಕಂಪ್ಯೂಟರ್ ಕೋರ್ಸ್‌ ಮಾಡುತ್ತೇನೆ ಎಂದಾಗಲೂ ಬೇಡವೆನ್ನಲಿಲ್ಲ. ಮಗಳ ಮೇಲೆ ಅಷ್ಟೊಂದು ಅಕ್ಕರತೆ ಅವನಿಗೆ.
      ಕಂಪ್ಯೂಟರ್ ಕೋರ್ಸ್‌ಗೆ ಸೇರಿದ ಮೇಲೆ ಸುಕನ್ಯಾಳ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಗಾಳಿ ಬೀಸಿತು. ಆ ಕಂಪ್ಯೂಟರ್  ತರಬೇತಿ ಕೇಂದ್ರ ನಡೆಸುತ್ತಿದ್ದವನು ಮನೋಹರ ಎಂಬ ಅವಿವಾಹಿತ,ಸ್ಪುರದ್ರೂಪಿ ಯುವಕ. ಬುದ್ಧಿವಂತಳೂ, ಸುಂದರಿಯೂ ಆಗಿದ್ದ ಸುಕನ್ಯಾ ಅವನಿಗೆ ತುಂಬಾ  ಇಷ್ಟವಾಗಿದ್ದಳು.ಕ್ರಮೇಣ ಅವಳ ಸ್ನೇಹ ಸಂಪಾದಿಸಿ  ಸಲುಗೆ ಬೆಳೆಸಿ ಹತ್ತಿರವಾದ. ಒಂದು ವರ್ಷದ ನಂತರ ಧೈರ್ಯ ಮಾಡಿ ಒಂದು ದಿನ "ಸುಕನ್ಯಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀನು ಒಪ್ಪಿದರೆ ಮದುವೆಯಾಗಬೇಕೆಂದಿರುವೆ" ಎಂದು ಅವಳ ಮುಂದೆ ಹೇಳಿದಾಗ ಸುಕನ್ಯಾ ನಾಚಿ  ನೀರಾಗಿದ್ದಳು.    ಸದಾಕಾಲ ಶ್ರೀಮಂತಿಕೆಯ ‌‌‌ಕನಸು ಕಾಣುತ್ತಿದ್ದ ಅವಳಿಗೆ,'ಬಯಸಿದ ಬಳ್ಳಿ ಕಾಲಿಗೆ ತೊಡರಿದಂತೆ' ಎನಿಸಿತ್ತು.ಮುಂದಾರು ತಿಂಗಳುಗಳು ಪ್ರೀತಿ ಪ್ರಣಯದಲ್ಲಿ ಕಳೆದು ಹೋದವು. ಅವರಿವರಿಂದ ರಾಮಣ್ಣನ ಕಿವಿಗೆ ಈ ವಿಷಯ ತಲುಪುವಷ್ಟರಲ್ಲಿ ತುಂಬಾ ತಡವಾಗಿತ್ತು.
       "ನಾವು ಬಡವರಮ್ಮ ; ಶ್ರೀಮಂತರ ಮನೆತನದ ಸಂಬಂಧ ನಮ್ಮಿಂದ ಆಗದ ಮಾತು ತಾಯೆ.  ನಮ್ಮ ಗೌರವ ಗಾಳಿಗೆ ತೂರಬೇಡಮ್ಮ" ಎಂದು ಮಗಳಿಗೆ ಬುದ್ದಿ ಹೇಳಿದ್ದು 'ನೀರಲ್ಲಿ ಹೋಮ ಮಾಡಿದಂಗೆ' ಆಗಿತ್ತು.ಅವಳು ಮನೋಹರನ ಧ್ಯಾನ ನಿಲ್ಲಿಸಲಿಲ್ಲ. ಕಾಲೇಜಿಗೆ ಹೋಗದಂತೆ ಪುಟ್ಟಮ್ಮನೂ ಮಗಳಿಗೆ ತಾಕೀತು ಮಾಡಿ ಮನೆಯಲ್ಲೇ ಉಳಿಸಿಕೊಂಡಳು. ಪರೀಕ್ಷೆಗೆ, ಮಗಳ ಬೆಂಗಾವಲಾಗಿ ತಾನೂ ಹೋಗಿ ಬಂದಳು. ಪರಿಣಾಮ ಮಾತ್ರ ಉತ್ತಮವಾಗಿರಲಿಲ್ಲ‌. ಪರೀಕ್ಷೆಯಲ್ಲಿ ಎರಡು ವಿಷಯಗಳಷ್ಟೇ ಪಾಸಾದವು.
          ಸುಕನ್ಯಾಳ ಅದೃಷ್ಟ ಗಟ್ಟಿಯಾಗಿತ್ತು.ಮನೋಹರನ ಮನೆಯಿಂದ ಇವರ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ಟಿತ್ತು. ಹತ್ತಾರು ಜನ ಸೇರಿ ರಾಮಣ್ಣನನ್ನು ಒಪ್ಪಿಸಿಯೇಬಿಟ್ಟರು.
          ಶ್ರೀಮಂತರ ಸಂಬಂಧ ಬಂದಿದ್ದಕ್ಕೆ ರಾಮಣ್ಣನಿಗೆ ಒಂದು ಕಡೆ ಸಂತೋಷವಾದರೂ, ಅವರಿಗೆ ತಕ್ಕಂತೆ ಮದುವೆ ಮಾಡಿಕೊಡಲು ಆಗುವ ಖರ್ಚು ವೆಚ್ಚದ ಚಿಂತೆ ಕಾಡತೊಡಗಿತು.ಜಮೀನಿನ ಮೇಲಿನ ಸಾಲ ತೀರದೆ, ಸರ್ಕಾರ ಸಾಲ ಮನ್ನಾ ಮಾಡೀತೆಂದು ಕಾಯುತ್ತಿದ್ದವನಿಗೆ ಮಗಳ ಮದುವೆ ಹೇಗೆ ಮಾಡಬೇಕೆಂಬುದೇ ಹಗಲು-ರಾತ್ರಿಯ ಆಲೋಚನೆಯಾಗಿಬಿಟ್ಟಿತ್ತು.
    
        ಗಂಡನಿಗೆ ಧೈರ್ಯ ತುಂಬಿದ ಪುಟ್ಟಮ್ಮ,  "ಬೇಕಾದರೆ ಮನೆ ಅಡವಿಟ್ಟು ಮಗಳ ಮದುವೆ ಮಾಡಿ ಬಿಡೋಣ.ನಮ್ಮ ಅದೃಷ್ಟಕ್ಕೆ ಒಳ್ಳೆಯ ಸಂಬಂಧವೇ ಮನೆ ಬಾಗಿಲಿಗೆ ಬಂದಿದೆ. ಎಲ್ಲಾ ಆ ದೇವರ ಕೃಪೆ.ನಾಳೆಯೇ ಬ್ಯಾಂಕಿಗೆ ಹೋಗಿ ವಿಚಾರಿಸಿ" ಎಂದು ಹುರುದುಂಬಿಸಿದಳು.  
         ಮನೆಯನ್ನು ಅಡವಿಟ್ಟು , ಹಲವೆಡೆ ಸಾಲ ಸೋಲ ಮಾಡಿದ, ದಂಪತಿಗಳು , ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಚೆಂದವಾಗಿ ಮದುವೆ ಮಾಡಿಕೊಟ್ಟರು.ಕನ್ಯಾದಾನ ಮಾಡಿದ ತೃಪ್ತಿ ಯಾಯಿತು ಆ ಎರಡೂ ಹಿರಿಯ ಜೀವಗಳಿಗೆ.
      ಗಂಡನ ಮನೆ ಸೇರಿದ ಸುಕನ್ಯಾ ತುಂಬಾ ಬದಲಾಗಿ ಹೋದಳು. ದೀಪಾವಳಿ ಹಬ್ಬಕ್ಕೆ ತವರು ಮನೆಗೆ ಬರಲೂ ನಿರಾಕರಿಸಿಬಿಟ್ಟಳು.
     ಇತ್ತ ಪುಟ್ಟಮ್ಮನ ಆರೋಗ್ಯ ದಿನೇದಿನೇ ಕ್ಷೀಣಿಸತೊಡಗಿತು. ಸಣ್ಣಪುಟ್ಟ ಚಿಕಿತ್ಸೆಗಳಿಂದ ಏನೂ ಪ್ರಯೋಜನವಾಗಲಿಲ್ಲ. ಅಲ್ಪಸ್ವಲ್ಪ ಹಣ ಜೋಡಿಸಿ ದೊಡ್ಡ ಆಸ್ಪತ್ರೆಗೆ ತೋರಿಸಿದಾಗ ರಾಮಣ್ಣನಿಗೆ ಆಘಾತ ಕಾದಿತ್ತು. ವೈದ್ಯರು "ಗರ್ಭಕೋಶ ಕ್ಯಾನ್ಸರ್ ಆಗಿದೆ. ಆದಷ್ಟು ಬೇಗ ಆಪರೇಷನ್ ಮಾಡಿಸದಿದ್ದರೆ ಅಪಾಯವಿದೆ" ಎಂದಿದ್ದರು. ಹಳೆಯ ಸಾಲವೇ ತೀರದಿರುವಾಗ ಈಗ ಎಲ್ಲಿಂದ ಹಣ ತರುವುದೆಂದು ರಾಮಣ್ಣನಿಗೆ ತಿಳಿಯದಾಗಿತ್ತು.ಅದಕ್ಕೆ ಇಂದು ಮಗಳ ಮನೆ ಬಾಗಿಲು ತಟ್ಟಿದ್ದ.ಮುಂದೆ ಜಮೀನು ಮಾರಿ ಹಣ ತೀರಿಸಿದರಾಯಿತು ಎಂದುಕೊಂಡಿದ್ದ.
       ನಿರಾಶೆಯಿಂದ ಬಸ್ ನಿಲ್ದಾಣದತ್ತ ಬರುತ್ತಿರುವಾಗ ಎದುರಿಗೆ ಬಂದ ರಾಮಣ್ಣನ ಆಪ್ತ ನಾಗಣ್ಣ ,ಇವನ ಸಪ್ಪೆ ಮೋರೆ ನೋಡಿ, ವಿಷಯ ಏನೆಂದು ವಿಚಾರಿಸಿದ. 
     ದುಃಖ ತಾಳಲಾಗದೆ ರಾಮಣ್ಣ ಎಲ್ಲವನ್ನು ಅರುಹಿ ಅತ್ತುಬಿಟ್ಟ. ಅವನನ್ನು ಸಮಾಧಾನ ಪಡಿಸಿದ ನಾಗಣ್ಣ , "ದೇವರಿದ್ದಾನೆ ,ಎಲ್ಲ ಸರಿ ಹೋಗುತ್ತೆ; ಚಿಂತಿಸಬೇಡ. ನೀನೀಗ ಊರಿಗೆ ಹೋಗು.ನಾನು ಸಂಜೆಗೆ ಭೇಟಿಯಾಗುತ್ತೇನೆ.ಏನಾದರೂ ಮಾಡಿದರಾಯಿತು.ಧೈರ್ಯವಾಗಿರು" ಎಂದು ಕಳುಹಿಸಿಕೊಟ್ಟ.
      ಅಲ್ಲಿಂದ ನಾಗಣ್ಣ ನೇರವಾಗಿ ಸೌಜನ್ಯಾಳ ಮನೆಗೆ ಬಂದ.
"ಓಹೋ! ಅಪ್ಪ ಈಗ ಹಣ ಕೇಳಲೆಂದು  ನಿನ್ನನ್ನು ಕಳಿಸಿದರೇನು?" ಎಂದು ಸುಕನ್ಯಾ ಖಾರವಾಗಿಯೇ  ಕೇಳಿದಳು.
         "ಅದಕ್ಕಲ್ಲಮ್ಮ , ನಿನಗೊಂದು ವಿಷಯ ಹೇಳುವುದಿತ್ತು. ಅದಕ್ಕೆ ಬಂದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರಗಾಲ ಬಂದು ನಮ್ಮ ಊರಿನ ಅನೇಕರು ಗೋವಾಕ್ಕೆ ದುಡಿಯಲೆಂದು ಗುಳೆ ಹೋಗಿದ್ದೆವು.ಕೆಲವು ತಿಂಗಳ ನಂತರ ಉಳಿದವರು ಊರಿಗೆ ಮರಳಿದರು. ಆದರೆ ನಾನು , ನನ್ನ ಹೆಂಡತಿ, ನಿಮ್ಮ ಅಪ್ಪ-ಅಮ್ಮ ಅಲ್ಲಿಯೇ ದುಡಿದರಾಯಿತು ಎಂದು ಉಳಿದುಕೊಂಡೆವು. ಒಂದು ರಾತ್ರಿ ನಾವು ಗುಡಿಸಲಿನಲ್ಲಿ ಮಲಗಿದ್ದಾಗ ಜೋರಾಗಿ ಅಳುತ್ತಿರುವ ಮಗುವಿನ ಧ್ವನಿ ಕೇಳಿಸಿತು. ನಾನು  ಹೊರಗೆ ಬಂದು ನಿಮ್ಮಪ್ಪನನ್ನ ಕರೆದೆ.ಇಬ್ಬರು ಬಂದು  ನೋಡಿದಾಗ, ಯಾರೋ ಮಗುವನ್ನು ಕಸದ ತೊಟ್ಟಿಯಲ್ಲಿ ಹಾಕಿ ಹೋಗಿದ್ದರು. ಮಗುವನ್ನೆತ್ತಿಕೊಂಡ ನಿಮ್ಮಪ್ಪ ಗುಡಿಸಲಿಗೆ ತಂದಾಗ,ಮಕ್ಕಳಿಲ್ಲದ ಪುಟ್ಟಮ್ಮ ತಾನೇ ಸಾಕುತ್ತೇನೆಂದಳು. ಒಂದು ವರ್ಷ ಅಲ್ಲೇ ಕಳೆದು ಊರಿಗೆ ಬಂದೆವು. ಈ ವಿಷಯ ನಮ್ಮನ್ನು ಬಿಟ್ಟು ಇನ್ನಾರಿಗೂ ಗೊತ್ತಿಲ್ಲ.ಆ ಅನಾಥ ಮಗು ನೀನೇ ಕಣಮ್ಮ .ಇಂದು ನೀನು ರಾಮಣ್ಣನ ಮನಸ್ಸು ನೋಯಿಸಿದ್ದು ನನಗೆ ತುಂಬಾ ಬೇಸರ ತರಿಸಿತು. ಹಣವಿಲ್ಲದಿದ್ದರೂ ಒಂದೆರಡು ಒಳ್ಳೆಯ ಮಾತು ಮಾತಾದರೂ ನಿನ್ನ ಬಳಿ ಇಲ್ಲವಲ್ಲ. ನಿನ್ನ ತಪ್ಪಿಗೆ ಮೊದಲು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳು"   ಎಂದು ನಾಗಣ್ಣ ಮಾತು ಮುಗಿಸಿದಾಗ ಸೌಜನ್ಯಾಳಿಗೆ ನೂರು ಸಿಡಿಲು ಒಂದೇ ಬಾರಿಗೆ ಬಡಿದಂತಾಗಿತ್ತು.
.....................................
✍ ಶಿವಕುಮಾರ. ಹಿರೇಮಠ.
ಗೌರಿಬಿದನೂರು.

No comments:

Post a Comment