Wednesday 27 May 2020

*ಉಕ್ಕಿನ ಕೋಟೆ*

           *ಉಕ್ಕಿನ ಕೋಟೆ*


 *ಉಕ್ಕಿನ ಕೋಟೆ*
ಪ್ರಬಲತೆ ಸಂಕೇತವು ಅದೋ ನಿಂದಿಹುದು 
ಬಂಡೆಗಳ ಚಿತ್ತಾರದ ಉಕ್ಕಿನ ದುರ್ಗವಿದು ||೨||
ಏಳು ಸುತ್ತು ಸುತ್ತಿಹುದು ಘಟಸರ್ಪದ ತೆರದಿ
ಬರಿದೆ ಕೋಟೆಯಲ್ಲ,ಇದು ಚರಿತೆಯ ಹಾದಿ||೪||

ಮಹಾ ಭಾರತದ ಆ  ಹಿಡಿಂಬ ವನವಿದು 
ಅಷ್ಟಾದಶಾಲಯಗಳ ದೈವ ಸನ್ನಿಧಿಯಿದು||೬||
ಗಜಾಶ್ವಗಳ ಹೆಜ್ಜೆ ಗುರುತು,ಅಂದ ಚಂದವಳ್ಳಿ
ಮಿನುಗುತಿವೆ ಪಾಳೆಗಾರಿಕೆಗೆ ಬೆಳಕ ಚೆಲ್ಲಿ||೮||

ಗಾಳಿ ಸೂಸುತಲಿತ್ತು‌ ಕೆಂಡ ಸಂಪಿಗೆ ಕಂಪು  
ಸಿದ್ಧನಾಥಲಿಂಗೇಶನ ಮುಡಿಗೆರೆದು ತಂಪು||೧೦||
ಮುರುಘರಾಜೇಂದ್ರರ ಬೃಹನ್ಮಠಕೆ ಮೂಲ
ಬಿಚ್ಚುಗತ್ತಿ ಭರಮಣ್ಣನು ಕಟ್ಟಿಸಿಹನು ಕೇಳ||೧೨||

ಮಳೆ ಬಿಸಿಲಿಗೆದೆಯುಬ್ಬಿಸಿ ನಿಂತಿಹವು ಸ್ಥಂಭ
ಸುಭದ್ರವಾದ ನವಿಲು ಉಯ್ಯಾಲೆಗಳ ಕಂಬ||೧೪||
ಪಟ್ಟ ಮಹೋತ್ಸವಕೆ ಹೊನ್ನ ಸರಪಳಿಯ ಧರಿಸಿ
ಸಿದ್ದೇಶನ ತೂಗಿದ್ದವು ಮಂಟಪದಲ್ಲಿರಿಸಿ||೧೬||

ಕಲ್ಲುಗಳೆ ಅರಳಿ ಕಮಲವಾಗಿರುವ ತೆರದಲಿ
ಗಾಳಿಗೋಪುರಗಳೆರಡು ಕಣ್ಣ ಸೆಳೆವವಿಲ್ಲಿ||೧೮||
ಉಕ್ಕಿನ ಕೋಟೆಯಿದು ಗತ ವೈಭವದಾ ಭಿತ್ತಿ
ಓಬವ್ವಳ ಸಾಹಸವು ಸರ್ವರಿಗೂ ಸ್ಪೂರ್ತಿ||೨೦||

 *ಶಿವಕುಮಾರ ಹಿರೇಮಠ*
ದಾವಣಗೆರೆ

27-5-2020

No comments:

Post a Comment