Friday, 28 September 2018


         *ಕೊಡಗು ನೆನೆದ ಮನ*
         

ಕೋಗಿಲೆ ಹಾರಿ ಹಾಡ ಬಂದಿಹುದು
ಕೊಂಚ ಕೂಡ ಉತ್ಸಾಹ ಕಾಣಲಿಲ್ಲ
ಕೊರಳನಾದಕೆ ಕರೆವ ಆ ಮರವೆಲ್ಲಿ?
ಕೊಡಗಿನ ಆ ಕಳೆ ಈಗ ಉಳಿದಿಲ್ಲ

ವರ್ಷನೇನೊ ಬಂದ ಸಡಗರದಿ
ವನಸಿರಿಗೊ, ಹೊಸಕಳೆ ಕಟ್ಟಲಿಲ್ಲ
ವರುಣನಿಗದೇನೋ ಅತ್ಯುತ್ಸಾಹ
ವಸುಂಧರೆಗೆ ಸಂಯಮ ಬತ್ತಿತಲ್ಲ!

ಸ್ವರ್ಗವೆ ಧರೆಗಿಳಿದಂತಿದ್ದ ಮಲೆಗಳು
ಸ್ವರೂಪವ ಬದಲಾಯಿಸಿವೆಯಲ್ಲ!
ಸ್ವತಂತ್ರ ಬಯಸಿ ಗುಡ್ಡ ಜರುಗಿದವೋ
ಸ್ವಯಂಕೃತ ಕರ್ಮ ಶಾಪವಾಯ್ತಲ್ಲ

ಕಾಫಿ ತೋಟಗಳು ತರೆದಂತಾಗಿವೆ
ಕಾಜಾಣಕೆ ತಂಬೆಲರು ಹಿಡಿಸುತ್ತಿಲ್ಲ
ಕಾಲನಾಟಕೆ ಕಮರಿವೆ ಬದುಕುಗಳು
ಕಾದ ವೀರರೆದೆ ನೋವ ತಾಳಲಿಲ್ಲ

       *ತ್ರಿನೇತ್ರಜ್*

   ಶಿವಕುಮಾರ ಹಿರೇಮಠ.
ಆಗಸ್ಟ್‌. 2018.

Wednesday, 12 September 2018

*ಕರುನಾಡ ಹಣತೆ*

ಸದಾ ಬೆಳಗುತಿರಲಿ ಈ ಹಣತೆ
ನಮ್ಮ ನಿಮ್ಮ ಕರುನಾಡ ಹಣತೆ ||ಪ||

ಒಡೆಯುವವರ ಮೂಢ
ಮನದ ಕತ್ತಲೆಯ ತೊಡೆಯುತ
ತನು ತನಗಳಲಡಗಿಕೊಂಡ
ಬೇಧ ಭಾವ ತಡೆಯುತ
ಸನ್ಮಂಗಳ ಸಂಕೇತವೆ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||ಅ.ಪ|


ರಾಶಿ ಜೋಳಕೆ ಹೊಂಬಣ್ಣವ ನೀಡುತ
ರಾಗಿ ಗದ್ದೆಯ ತೆನೆಹಾಂಗೆ ಬಳುಕುತ
ದಕ್ಷಿಣೋತ್ತರಗಳನು ಅಖಂಡ ಎನ್ನುತ
ಸದ್ವಿಚಾರ ಸೂಸುವ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೧||


ಕಾವೇರಿ ಮಡಿಲಲಿ ಮುದ್ದಾಗಿ ನಗುತ
ಕೃಷ್ಣೆಯಲೆಯಲಿ ಮುದದಿಂದ ತೇಲುತ
ಸಹ್ಯಾದ್ರಿ ರಂಗವಲ್ಲಿ ಚಿತ್ತಾರ ತೋರುತ
ಸದ್ವಿಕಾಸ ತುಂಬಿಹ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೨||


ಜಾತಿಮತಗಳನೆಲ್ಲ ಒಂದಾಗಿ ಬೆರೆಸುತ
ಸಂತರ ಶರಣರ ತತ್ವಗಳನು ಸ್ಪುರಿಸುತ
ಎಲ್ಲೆಡೆ ಕನ್ನಡದ ನುಡಿಕಿರಣ ಹರಿಸುತ
ಸಹೃದಯತೆ ಕಾಂತಿಯ ಈ ಹಣತೆ
ಬಲ್ಲವರ ಜ್ಞಾನತೈಲದಾ ಹಣತೆ||೩||
      ......................

ತ್ರಿನೇತ್ರಜ್

ಶಿವಕುಮಾರ ಹಿರೇಮಠ