Saturday, 24 November 2018

ರಗಳೆ


            *ಜ್ಞಾನೋದಯ*
                    ರಗಳೆ
     
ಆದಿಯೋಳ್ ನಮಿಸುತಾ ಗಣೇಶಂಗೆ ಮನದಲಿ
ಮೊದಲಕ್ಷರ ಕಲಿಸಿಹ ಅಮ್ಮಗೂ ನಮಿಸುತಲಿ
ರಚಿಸಿದೆನಿದ ನಿಮಗಾಗಿ ರಗಳೆಯ ನಿಯಮದೊಳ್
ವಾಚಿಸಿ ಖುಷಿ ಪಡಲೆಂದ್ಸವಿಗನ್ನಡ ನುಡಿಯೋಳ್ ||೪||

ಅರಸುತಲಿ ತಾ ಜ್ಞಾನವನು ಬೋಧಿಸಲು ಜಗಕೆ
ಅರಮನೆಯ ತೊರೆದು ಬಂದನೀತ ಜಗದ ಹಿತಕೆ
ಹಲವರೆಡೆಗೆ ಅಲೆದಲೆದಾ ಗೌತಮನು ಕೊನೆಗೆ
ಬಳಲಿ ಬಂದು ಕುಳಿತನು ಬೋಧಿ ವೃಕ್ಷದ ಕೆಳಗೆ ||೮||

ಒಡನೆ ಮೂಡಿ ನಿಂದಿಹ ತನ್ನ ರೂಪವ ಕಂಡು
ನೋಡುತಲೆವೆಯಿಕ್ಕದೆ ಬಹಳೆ ಅಚ್ಚರಿಗೊಂಡು
ಕೇಳಿದನು ತವಕದಲಿ ನೀನ್ ಅದಾರೆಂದು ಪೇಳ್
ಉಲಿಯಿತದು ಅರಿವು ನಾ ನಿನ್ನಂತರಾತ್ಮದೋಳ್ ||೧೨||

ಅರಿಯದೆಯೆ ನಿನ್ನ ನೀಂ ಹೊರಟೆಯೋ ಹುಡುಕಿ ಬರಿ
ಗುರಿಯನೊಂದೆ ಅರಸುತ ನೊಂದೆ ನೀನು ಈ ಪರಿ
ನಿನ್ನೊಳವನರಿ ಅರಿವ ಮುನ್ನವೀ ಲೋಕವನು
ನಿನ್ನರಿವು ನಾ ತೋರ್ವೆ ಬೆಳಕಿನೆಡೆ ದಾರಿಯನು ||೧೬||

ಅರಿವಾಯಿತಾಗವಗೆ ತಾನೇನನೋ ಅರಸಿ
ತಿರುತಿರುಗಿ ಪಡೆಯಲೇ ಬೇಕೆಂದು ಬಯಬಯಸಿ
ಗಸಣಿಗೊಳಗಾದೆ ಅಃ ನನ್ನೆ ನಾನು ಅರಿಯದೆ
ಆಸೆಯನು ತೊರೆಯದೆ ಸರಿ  ಮಾರ್ಗವನು ತಿಳಿಯದೆ  ||೧೮||

ಎಂದು ನಕ್ಕನು ಮನದಿ ಗೌತಮನು ಹರ್ಷದೋಳ್
ಮಿಂದು ತೇಲಿತಣಿದನು ತಿಳಿವಿನ ತಿಳಿಗೊಳದೋಳ್
ನೀಡಿದನು ಬೆಳಕ ಅಷ್ಟಾಂಗ ಬೋಧಿಸುತ
ಜಗದ ದೃಷ್ಟಿಯೊಳು ಗೌತಮನಾದ ತಥಾಗತ. ||೨೦||
     
         **************

 *ತ್ರಿನೇತ್ರಜ್*




Thursday, 22 November 2018

ಕಂದ ಪದ್ಯ

   
    ∆ ಕಂದ ಪದ್ಯ ∆

       *ಭಿಕ್ಷಾಟನೆ*

ಭಿಕ್ಷುಕ ನಾ ಭಗವಂತನ|
ಸಾಕ್ಷಿಯಲಿ ಕರವನು ಮುಗಿದು ಕೇಳೆ ಕೊಡುವಿರಾ||
ಅಕ್ಷಿಯೊಳು ನಲುಮೆ ತುಳುಕಿಸಿ|
ಭಿಕ್ಷೆಯ ರೂಪದಲಿ ಮಾನವತೆ ನೀಡುವಿರಾ||೧

ಒಲವಿನ ಜಲವ ಹುಡುಕುತಲಿ|
ಅಲೆದೆನ್ನೆಡೆ ಕೊಂಚ ಬೊಗಸೆಯೊಳು ಹುಯ್ಯುವಿರಾ||
ಜೋಳಿಗೆಗೆ ಒಂದಿನಿತು ಹಿಡಿ|
ಕಲಿತ ಜ್ಞಾನವೆನಗೂ ಸುರಿದು ಹರಸುವಿರಾ||೨

ಲಕ್ಷ ವರಹವನು ಒಪ್ಪೆನು|
ವಕ್ಷದೊಳಗಣ ಸಿಹಿ ಮಮತೆಯನು ಹನಿಸುವಿರಾ||
ರಕ್ಷಕ ನೇಮಿಪ ನೀತಿಯ|
ಕಕ್ಷೆಯೊಳು ಗಳಿಸಿದ ಸುಕೃತವ ತುಸು  ಎರೆವಿರಾ||೩

ಬಲ್ಲಿದರಾದೊಡೆ ಭಿಕ್ಷುಕ|
ನಲ್ಲಿ ಅರಿವಿನ ನುಡಿದಾನವ ಕರುಣಿಸುವಿರಾ||
ಇಲ್ಲದಿರೆ ಜೊತೆಗೆ ಬನ್ನಿರಿ|
ಎಲ್ಲಿದೊರೆವುದೆಂದು ಕಾಣ್ವ ಜೊತೆಯಾಗುವಿರಾ||೪


    *ತ್ರಿನೇತ್ರಜ್*









Sunday, 18 November 2018


    *ಹೊಯ್ದಾಟ*
ಏನೋ ತಳಮಳ
ಮನವೆಲ್ಲ ವಿಲ ವಿಲ
ಗೆಳೆಯ ನಿನ್ನ ಇಲವ ಬಲ್ಲೆ
ಹೇಗೆ ಹೇಳಲಿ ಕಳವಳ

ನನ್ನ ಜೀವ ಜನುಮದಾತ
ಬಾಲ್ಯದ ಒಡನಾಡಿ
ಬಯಸಿದ್ದ ಪಡೆದೆನು ನಾ
ಅಪ್ಪನ ಕಾಡಿ ಬೇಡಿ
ಹೇಗಿಂದು ಕಾಡಲಿ
ಏನೆಂದು ಬೇಡಲಿ
ಹೃದಯವು ಬಯಸಿಹ ಜೋಡಿ

ಕನಸು ನೂರು ಅರಳುತಿವೆ
ನಿನ್ನೆಡೆ ಒಲವ ತೋರಿ
ವಾತ್ಸಲ್ಯವು ತಡೆಯೊಡ್ಡುತಿದೆ
ಮೂಡಿಹ ಆಸೆ ಮೀರಿ
ಅರಿತಿರುವೆ ನಿನ್ನನು
ನೀಡಿರುವೆ ಮನವನು
ಹೇಗೆ ಹೇಳಲೆನ್ನ ಬಯಕೆಯನು

*ತ್ರಿನೇತ್ರಜ್*
೧೮-೧೧-೧೮. ೯-೦೦pm