Saturday 24 November 2018

ರಗಳೆ


            *ಜ್ಞಾನೋದಯ*
                    ರಗಳೆ
     
ಆದಿಯೋಳ್ ನಮಿಸುತಾ ಗಣೇಶಂಗೆ ಮನದಲಿ
ಮೊದಲಕ್ಷರ ಕಲಿಸಿಹ ಅಮ್ಮಗೂ ನಮಿಸುತಲಿ
ರಚಿಸಿದೆನಿದ ನಿಮಗಾಗಿ ರಗಳೆಯ ನಿಯಮದೊಳ್
ವಾಚಿಸಿ ಖುಷಿ ಪಡಲೆಂದ್ಸವಿಗನ್ನಡ ನುಡಿಯೋಳ್ ||೪||

ಅರಸುತಲಿ ತಾ ಜ್ಞಾನವನು ಬೋಧಿಸಲು ಜಗಕೆ
ಅರಮನೆಯ ತೊರೆದು ಬಂದನೀತ ಜಗದ ಹಿತಕೆ
ಹಲವರೆಡೆಗೆ ಅಲೆದಲೆದಾ ಗೌತಮನು ಕೊನೆಗೆ
ಬಳಲಿ ಬಂದು ಕುಳಿತನು ಬೋಧಿ ವೃಕ್ಷದ ಕೆಳಗೆ ||೮||

ಒಡನೆ ಮೂಡಿ ನಿಂದಿಹ ತನ್ನ ರೂಪವ ಕಂಡು
ನೋಡುತಲೆವೆಯಿಕ್ಕದೆ ಬಹಳೆ ಅಚ್ಚರಿಗೊಂಡು
ಕೇಳಿದನು ತವಕದಲಿ ನೀನ್ ಅದಾರೆಂದು ಪೇಳ್
ಉಲಿಯಿತದು ಅರಿವು ನಾ ನಿನ್ನಂತರಾತ್ಮದೋಳ್ ||೧೨||

ಅರಿಯದೆಯೆ ನಿನ್ನ ನೀಂ ಹೊರಟೆಯೋ ಹುಡುಕಿ ಬರಿ
ಗುರಿಯನೊಂದೆ ಅರಸುತ ನೊಂದೆ ನೀನು ಈ ಪರಿ
ನಿನ್ನೊಳವನರಿ ಅರಿವ ಮುನ್ನವೀ ಲೋಕವನು
ನಿನ್ನರಿವು ನಾ ತೋರ್ವೆ ಬೆಳಕಿನೆಡೆ ದಾರಿಯನು ||೧೬||

ಅರಿವಾಯಿತಾಗವಗೆ ತಾನೇನನೋ ಅರಸಿ
ತಿರುತಿರುಗಿ ಪಡೆಯಲೇ ಬೇಕೆಂದು ಬಯಬಯಸಿ
ಗಸಣಿಗೊಳಗಾದೆ ಅಃ ನನ್ನೆ ನಾನು ಅರಿಯದೆ
ಆಸೆಯನು ತೊರೆಯದೆ ಸರಿ  ಮಾರ್ಗವನು ತಿಳಿಯದೆ  ||೧೮||

ಎಂದು ನಕ್ಕನು ಮನದಿ ಗೌತಮನು ಹರ್ಷದೋಳ್
ಮಿಂದು ತೇಲಿತಣಿದನು ತಿಳಿವಿನ ತಿಳಿಗೊಳದೋಳ್
ನೀಡಿದನು ಬೆಳಕ ಅಷ್ಟಾಂಗ ಬೋಧಿಸುತ
ಜಗದ ದೃಷ್ಟಿಯೊಳು ಗೌತಮನಾದ ತಥಾಗತ. ||೨೦||
     
         **************

 *ತ್ರಿನೇತ್ರಜ್*




No comments:

Post a Comment