Thursday, 2 May 2019


ಹಾಸ್ಯ ಕವನ

       #ಹೀಗೊಂದುಸಾರಿ...
               
           ಕವಿ - ಶಿವಕುಮಾರ ಹಿರೇಮಠ

ಚೌತಿಯ ದಿನದಿ ಗಣಪನ ಪೂಜೆ
ಮನೆಯಲಿ ನಡೆದಿತ್ತು
ಸಿಂಗಾರ ಮಾಡಿದ ಮಾಡಲಿ ಮೂರ್ತಿ ಕೂಡಿಸಲಾಗಿತ್ತು
ವಿದ್ಯುತ್ ಲೈಟು ಪಟಾಕಿ ಘಾಟು
ಸಂಭ್ರಮ ಹೆಚ್ಚಿತ್ತು
ಗರಿಕೆ ಹೂವನು ಹಿಡಿದ ಅಣ್ಣನ
ಪೂಜೆ ಸಾಗಿತ್ತು

ಅಕ್ಕನ ಕೈಯಲಿ ಸುರುಸುರು ಬತ್ತಿ
ಫಳಫಳ ಬೆಳಗಿತ್ತು
ಕಣ್ಣರಳಿಸಿದ ತಂಗಿಯ ಮುಖದಲಿ
ಕಿಲಕಿಲ ನಗುವಿತ್ತು
ಅಡಿಗೆಮನೆಯ ಮೋದಕ ವಾಸನೆ
ನನ್ನನು ಸೆಳೆದಿತ್ತು
ನೈವೇದ್ಯಕೆಂದು ತಟ್ಟೆಯು ಬರಲು
ಆಸೆಯು ಹೆಚ್ಚಿತ್ತು

ಎಲ್ಲರ ಧ್ಯಾನವು ಭಕ್ತಿಭಾವದಲಿ
ಮುಳುಗಿ ಹೋಗಿತ್ತು
ನನ್ನಯ ಚಿತ್ತವು ಮೋದಕದತ್ತಲೆ
ಪದೆ ಪದೆ ಹರಿದಿತ್ತು
ಲಗುಬಗೆಯಿಂದ ಮೋದಕ ಸವಿಯೊ
ಆತುರ ಮೂಡಿತ್ತು
ಸಮಯವ ನೋಡಿ ತಟ್ಟೆಗೆ ನನ್ನಯ
ಕೈಯದು ಚಾಚಿತ್ತು

ಎಲ್ಲಿತ್ತೇನೋ ಇಲಿಯೊಂದಾಗಲೆ
ತಟ್ಟೆಗೆ ನುಗ್ಗಿತ್ತು
ಮೋದಕದಿಂದ ಘಮಘಮ ಗಂಧ
ಅದಕೂ ತಲುಪಿತ್ತು
ಚಿಟ್ಟನೆ ಚೀರಲು ಅಕ್ಕನ ಮೇಲೆ
ಇಲಿಯು ಎಗರಿತ್ತು
ಅವಳೆಗರಾಟಕೆ ಅಕ್ಷತೆ ಮೋದಕ
ಚೆಲ್ಲಾಪಿಲ್ಲಿಯಾಯ್ತು

ಹೆದರಿದ ತಂಗಿ ಅಣ್ಣನ ಹಿಡಿಯಲು
ಪಂಚೆಯು ಉದುರಿತ್ತು
ತೀರ್ಥವು ಹಾರಿ ಅಕ್ಕನ ಮುಖಕೆ
ಅಭಿಷೇಕ ಮಾಡಿತ್ತು
ಗಲಾಟೆಯಿಂದ ಮೂಷಿಕರಾಜ
ತಪ್ಪಿಸಿಕೊಂಡಿತ್ತು
ಅಕ್ಕ-ಅಣ್ಣನ ಸ್ಥಿತಿ ನೋಡಿ ನಮಗೆ
ಮುಸಿ ಮುಸಿ ನಗುಬಂತು
.... .... .... .... .... .... .... ....

*ತ್ರಿನೇತ್ರಜ್*

Tuesday, 19 February 2019

ಹೊಂಚು

        ಹೊಂಚು
ಬಾನಾಡಿಯ ಸಾಂಗತ್ಯ ಬಯಸೆ
ಬಾನ ಮುಟ್ಟಬಹುದೇನು ಕೂರ್ಮವು
ಎತ್ತರೆತ್ತರಕೇರಬಯಸುವ ಹುಚ್ಚು!
ತಪ್ಪೀತೆ ಮರಳಿ ಮಣ್ಣಿಗಿಳಿವ ಕರ್ಮವು

ಕಾದಿವೆ ಅದೋ,ರಣಹದ್ದುಗಳು
ಹಸಿ ಮಾಂಸ ಬಿಸಿ ನೆತ್ತರಿನ ಊಟಕೆ
ಬರಿ ಮೂಳೆಗಳಾಗಿ ಬಿತ್ತು ಬದುಕು
ಬಲಿಯಾದವರದೆಷ್ಟೋ ಈ ಕೂಟಕೆ

ಮುಖದಲ್ಲೇನು ಕಂಡೀತು ಕ್ರೌರ್ಯ
ಸಣ್ಣ ಕಣ್ಣುಗಳೊಡನೊಂದು ಚುಂಚು
ಬಳ್ಳಿಯಂತೆ ಬಳಕುವ ಕೊರಳಿನಡಿ
ಒರಟಾದ ನಖಗಳು ಹಾಕಿವೆ ಹೊಂಚು

ಅಡವಿ ನ್ಯಾಯದ ಕೊಡೆಯಡಿಯಲ್ಲಿ
ಅಸಹ್ಯ ಆಸೆಗಂಟಿನಿಂತ ಖೂಳರ ದಂಡು
ಬದುಕ ದಾರಿ ಅರಸಿ ಬರುವ ಮುಗುದ
ಜೀವಗಳ ಬಲಿಗೆ ಕುಳಿತಿದೆ ಕಾದುಕೊಂಡು

  *ತ್ರಿನೇತ್ರಜ್*

Sunday, 3 February 2019

*ಅಪ್ಸರೆ*

ಭಾವಗೀತೆ
-----------
 

    *ಅಪ್ಸರೆ*

ನಾ ಕಂಡ ಚೆಲುವೆಯರಲ್ಲಿ
ನೀನೋರ್ವಳೆ ಅಪ್ಸರೆ.
ಎನ್ನ ಹೃದಯ ಬೆಳಗುವುದು
ನೀ ಬಳಿ ಬಂದರೆ.
ಅಪ್ಸರೆ... ಪ್ರೇಮ ಧಾರೆ..|ಪ|

ಆ ನಿನ್ನ ಸುಂದರ
ಕಣ್ಣಿನ ಹಣತೆಯೊಳು
ಬಿಂಬತೈಲ ನಾನಾಗಿ
ನೆಲೆಸುವ ಆಸೆ,
ನೋಟದ ಕುಡಿಯಿಂದ
ಒಲವದೀಪ ಹೊತ್ತಿಸಿ
ನಿಸ್ಸಂಕೋಚದಿ
ತೋರು ನಿನ್ನಾಸೆ.
ಭಾವಶೃಂಗದ ಉತ್ತುಂಗವ
ಏರಿ ನಿಲುವ ಆಸೆ.
ಅಪ್ಸರೆ... ಪ್ರೇಮ ಧಾರೆ..|೧|

ಮನದ ಬಯಕೆ ಬೆತ್ತಲು,
ಎದೆಯಲಿ ಬರಿ ಕತ್ತಲು
ಕಾಣಲಾರದಾಗಿದೆ
ಎನೊಂದು.
ಪ್ರೇಮ ದೀಪ ಹೊತ್ತಿಸು
ಆಸೆಗಳು ಕಾಣುವವು
ಒಂದೂ ಬಿಡದೆ ಈಡೇರಿಸು
ಬಳಿ ಬಂದು
ಪ್ರೇಮಲೋಕದಲಿ ನೆಲೆಸೋಣ ಎಂದೆಂದೂ.
ಅಪ್ಸರೆ... ಪ್ರೇಮ ಧಾರೆ..|೨|
------------------...✒ *ತ್ರಿನೇತ್ರಜ.*

Wednesday, 30 January 2019

      *ದುಂಕಾರ*

ಏತಕಾದೆನೋ ಅರಿಯೆ
ನಾನಾಗಬಾರದಿತ್ತು ದುಂಬಿ
ಏಗಲಾರದ ಬದುಕಲೆಲ್ಲ
ಬರಿ ವಿಫಲತೆಗಳದೆ ದೊಂಬಿ

ಬಣ್ಣ ಬಣ್ಣದ ಹೂವುಗಳ
ಕಂಡರೇನೋ ಭಯವೆನಗೆ
ಅಂದ ಚಂದ ಕಣ್ಸೆಳೆದರೂ
ನಡುಕದೇಕೋ ಮೈಯೊಳಗೆ
ಮಧುರ ಮಧುವ ನೆನೆದಾಗ
ತನುವ ಹಸಿವು ಜೋರು
ಅಭಿಮಾನವ ಬಿಡಲೊಪ್ಪದೆ
ಕುಡಿವೆ ಒರತೆಯ ನೀರು

ಹಾರಬಲ್ಲೆನಾದರೇನು
ಎಂದೂ ಹಕ್ಕಿಯಾಗೆನೋ
ಹಾಡಬಲ್ಲೆನಾದರೇನು
ಕೋಕಿಲಕೆ ಸಮನಾಗೆನೊ
ವಿಷಕೊಂಡಿ ಅಡಿಗಿದ್ದರು
ವೃಶ್ಚಿಕವಾಗುವೆನೇನೋ
ಎಲ್ಲವಿದ್ದೂ ಗೆಲುವಿಲ್ಲದ ದುಂಬಿಯೇತಕಾದೆನೋ

    ತ್ರಿನೇತ್ರಜ

        *ಮಿಲನ*
ಹೃದಯ ಮೈತ್ರಿಯ ಸಿಹಿ ಮಿಲನ
ಸುಖ ಶೃಂಗದ ಹಿತಕರ ಮಿಥುನ

ತನ್ನ ಮಡಿಲನೆ ಮಂಚವಾಗಿಸಿ
ನಿಶೆ ಕೆಣಕಿಹಳು ಕರೆದೆಮ್ಮನು
ಸುಪ್ತ ಚೆಲುವ ನವಿರು ತಾಗುತ
ತುಂಬಿತಂತು ಮನಕೆ ಮತ್ತನ್ನು

ದೀಪವಾರೊ ಮುನ್ನ ನಯನ
ಮಧುರ ನುಡಿಗಳನಾಡಿಹವು
ಬೆಳಕ ಮುಚ್ಚುತ ಅಧರಗಳು
ಮಧುವರಸಿ ಹೊಸೆದಾಡಿಹವು

ಧುತ್ತನೆರಗೆ ರತಿಪತಿ ಜೋಡಿ
ಅಂತರಂಗದಿ ಶೃಂಗಾರ ಲೀಲೆ
ಶರಣಾಗಿಸಲೆ ಮೊದಲಿಟ್ಟಿರಲು
ಓಡಿಹುದು ನಾಚಿಕೆ,ಇಲ್ಲದೆ ನೆಲೆ.

ತನುವ ತಾಳ ಆವೇಗಕೆ ಸಿಲುಕಿ
ನಲಿದುಲಿಯಿತು ಉಸಿರಾಟ
ಗೆಲುವಿಗಾಗಿ ಕಾದು ಕಾಯ್ದು
ಸೋಲಿಗೆ ಶರಣಾಯಿತು ಕೂಟ

   ತ್ರಿನೇತ್ರಜ.
( ಶಿವಕುಮಾರ ಹಿರೇಮಠ)
           *ಪ್ರಳಯ ಮುನ್ನ*
         
ಎನೀ ವಿಪ್ಲವ ತಲ್ಲಣಿಸಿದೆ ಭಾವ
ಅರವಿಗೆಟುಕದ ಘೋರ ಸಂಭವ||
ಧರಣಿ ಎದೆಯೊಳೆನೋ ಕಂಪನ
ಪ್ರಳಯಾಗಮನ ಮುನ್ಸೂಚನ ||ಪ||

ಕತ್ತಲ ರಾತ್ರಿಯ ಬಾಗಿದ ಕತ್ತು
ಬೆವರುತ ಬೆಚ್ಚುತ ಸಾಗುತಿದೆ
ಚಂದ್ರನಿಲ್ಲದ ಕರಿಬಾನಿನಲಿ
ಧೂಮಕೇತುವು ಕಾಣಿಸಿದೆ
ಸಂಚಲನ ಮರೆತ ಸಾಗರ
ಮೌನದ ಮನೆಯ ಸೇರಿದೆ ||೧||

ಕಡಿದು ಸುಟ್ಟ ಮರದ ಆತ್ಮಗಳು
ಕಣ್ಣರಳಿಸಿ ಕೂತಿವೆ ದಿಟ್ಟಿಸಿ
ಕೊಂದ ಬೆಂದ ಮೂಕಜೀವಿಗಳ
ಪ್ರೇತಗಳು ಕಾಯ್ದಿವೆ ಕಾತರಿಸಿ
ಬಂದಿತೆ ಅಂತ್ಯವು ಮಾನವಾ?
ತಂದುಕೊಂಡೆಯಾ ಹಂಬಲಿಸಿ.||೨||
        -------------
          *ತ್ರಿನೇತ್ರಜ*
(ಶಿವಕುಮಾರ ಹಿರೇಮಠ)

             *ನಿವೇದನೆ*

ಉಸಿರಾಗು ಬಾ ನನ್ನೆದೆಗೆ
ಹಸಿರಾಗು ಬಾ ಬದುಕಿಗೆ
ನಿನ್ನ ಕಾಣದ ನನ್ನ ಕಂಗಳು
ತೊರೆದಂತೆ ನೀರನು ಮೀನಿಗೆ || ಪ ||

ನೀ ಬಂದರೆ ಈ ಜೀವಕೆ
ಅನುರಾಗ ಶುಭಯೋಗ
ನಿನಗಾಗಿ ನನ್ನದೆಲ್ಲವೂ
ಮಾಡವೆನು ಎಲ್ಲಾ ತ್ಯಾಗ
ಜೊತೆಯಾಗು ಬಾ ಚೆಲುವೆ
ಆವರಿಸು ಹೃದಯವನೀಗ||೧||

ಉಸಿರಿರದೆ ಮಿಡಿಯುವುದೇ
ಎದೆಯೊಳಗಿನ ತಕಧಿಮವು
ಪ್ರೇಮವಿರದೆ ನುಡಿಯುವುದೇ
ಹೃದಯದೊಳಗೆ ಸರಿಗಮವು
ಜೊತೆ ನೀನು ಹೆಜ್ಜೆಹಾಕದೇ
ಸಾಗದೀ ಬಾಳ  ಪಯಣವು||೨||

             ** ** ** **
     ತ್ರಿನೇತ್ರಜ್
(ಶಿವಕುಮಾರ. ಹಿರೇಮಠ)
   
          *ಬೇಡಿಕೆ*
ಹಾಡಾಗಲು ಹಂಬಲಿಸುವ
ಪದಗಳಿಗೆ ದನಿ ಬೇಕಿದೆ
ಹೊಸ ಪಲ್ಲವಿ ನವ ಭಾವಕೆ
ಸಹಯೋಗ ರಾಗ ಬೇಕಿದೆ||ಪ||

ಮನದ ನೋವು ಕಕ್ಕುವ
ಕಹಿ ಭಾವದ ಪದಗಳಿವೆ
ಕಾಲ್ತುಳಿತಕೆ ಘಾಸಿಗೊಂಡ
ರಕ್ತಸಿಕ್ತವಾದ ಪದಗಳಿವೆ
ದೌರ್ಜನ್ಯವ ಜಗದಗಲಕು
ಸಾರಿ ಸಾರಿ ಹೇಳಬೇಕಿದೆ||೧||

ಪ್ರೀತಿ ಕಾಣದೆ ಸೊರಗಿಹ
ಭಾವ ವಿಹೀನ ಪದಗಳಿವೆ
ಭೇದ ಭಾವಕೆ ನೊಂದಿಹ
ಬೆಂದಿಹೋದ ಪದಗಳಿವೆ
ಅವಿವೇಕದ ಭ್ರಾಂತಿಯನ್ನ
ಅಳಿಸಹಾಕಲೇಬೇಕಾಗಿದೆ ||೨||
..... ..... ..... .... ‌.....
ತ್ರಿನೇತ್ರಜ್.


 *ಒಲವಗೀತೆ*

ಬರೆದೆನು ನಿನಗಾಗಿ
ಈ ಒಲವ ಕವಿತೆ
ಹಾಡಲೆ ಪಂಚಮದಿ
ಓ ಪ್ರಾಣ ಕಾಂತೆ||ಪ||

ಎಂಥ ಮುದದಿಂದ
ಎಷ್ಟೋ ನಯದಿಂದ
ಪದಗಳ ನಾ ಬೆಸೆದೆ
ಕಮಲದ ದಳವಿರಿಸಿ
ಕಾಮನ ಬಿಲ್ಲ ಬಳಸಿ
ನವಿರಾಗಿ ರಚಿಸಿದೆ||೧||

ಹೃದಯ ಹೂವಿಂದ
ಭಾವ ಮಕರಂದ
ಸುಗಂಧವ ಸುರಿದೆ.
ಶಶಿಯ ನಗುವಂತ
ಜಾಜಿಯ ಹೂವಂತ
ನಿನ್ನಂದವ ತುಂಬಿದೆ||೨||

ಝರಿಯು ಗಿರಿಯಿಂದ
ತಾರೆ ಅಂಬರದಿಂದ
ಬಳಕು ಬೆಳಕನಿತ್ತಿವೆ.
ಸೆಳೆಯಿತು ನಿನ್ನಂದ
ದೇವರ ದಯೆಯಿಂದ
ಹೃದಯಗಳು ಬೆಸೆದಿವೆ||೩||

*ತ್ರಿನೇತ್ರಜ್*



*ಯೋಗಾಭ್ಯಾಸ*

(೨೧-೬-೧೮. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ)

ಬೆಳಗೆದ್ದು ದಿನವೂ
ಸೂರ್ಯೋದಯಕೆ
ಮಾಡುವ ಬನ್ನಿ ಯೋಗ
ಗಡಿಬಿಡಿ ಬದುಕಲಿ 
ಸ್ವಾಸ್ಥ್ಯಕೆ ಮಾಡುವ 
ಅಲ್ಪ ಸಮಯದ ತ್ಯಾಗ

ಸ್ವಚ್ಛ ಬಯಲಿನಲಿ
ನಿರ್ಮಲ ಭಾವದಿ
ಜೋಡಿಸಿ ನಮ್ಮ ಕರ
ಚಿಂತೆ ಮರೆಯುವ
ಏಕಚಿತ್ತದಿ ಮಾಡುತ
ಸೂರ್ಯ ನಮಸ್ಕಾರ 

ಒತ್ತಡ ತೊರೆಯಲು
ಯೋಗ ಮಾಡುವ
ಅಂತಃಶಕ್ತಿ ವೃದ್ದಿಗೆ
ಚೈತನ್ಯಶೀಲ ಅಂಗ
ಹೊಂದುತ ಹೇಳುವ
ವಿದಾಯ ಮದ್ದಿಗೆ
--- ---- --- --- ---
ತ್ರಿನೇತ್ರಜ್

( ಶಿವಕುಮಾರ. ಹಿರೇಮಠ)


    *ಅತ್ತೆ ಅವತಾರಗಳು*
ಅಯ್ಯೊ ಅತ್ತೆ! ನನ್ನತ್ತೆ
ನಿನ್ನವತಾರಕೆ ನಾ ಬೇಸತ್ತೆ.

ಐದನೇ ವಯಸಲಿ
ಅಂದು ಕೇಳಿದ್ದೆ
ಅತ್ತೆ ಅತ್ತೆ ಆಸೆ ಆಗ್ತಿದೆ
ಲಡ್ಡು ಕೊಡು ಅತ್ತೆ.
ಕೆನ್ನೆ ಊದಿಸಿ ಗದರಿದಳತ್ತೆ
ಲಡ್ಡುನು ಇಲ್ಲ ಪಡ್ಡುನು ಇಲ್ಲ
ತಂಗಳನ್ನವನೆ ತಿಂದು
ತೊಲಗಲೋ ಕತ್ತೆ.

ಹತ್ತನೆ ವಯಸಲಿ
ಮೆತ್ತಗೆ ನಾ ಕೇಳಿದ್ದೆ
ಅತ್ತೆ ಅತ್ತೆ ಪುಸ್ತಕ ಬೇಕಿದೆ
ಹಣವನು ಕೊಡು ಅತ್ತೆ.
ಕಣ್ಣು ಕೆಕ್ಕರಿಸಿ ನುಡಿದಳತ್ತೆ
ಹಣಾನು ಇಲ್ಲ ಹೆಣಾನೂ ಇಲ್ಲ
ಇನ್ನೊಂದ್ಸಾರಿ ದುಡ್ಡು ಕೇಳಿ
ಬಂದರೆ ನೀ ಸತ್ತೆ

ಹದಿನೈದನೆ ವಯಸಲಿ
ದೈನದಿಂದ ಕೇಳಿದ್ದೆ
ಅತ್ತೆ ಅತ್ತೆ ಶಾಲೆ ದೂರ
ಸೈಕಲ್ ಕೊಡು ಅತ್ತೆ.
ಅಬ್ಬರಿಸಿ ಇಂತೆಂದಳತ್ತೆ
ಸೈಕಲ್ಲೂ ಇಲ್ಲ ಗುಂಡ್ಕಲ್ಲು ಇಲ್ಲ
ಸುಮ್ಮನೆ ನಮ್ಮನೆ ಹತ್ರಕೆ
ಸುಳಿಬೇಡವೋ ಮತ್ತೆ

ಇಪ್ಪತ್ತನೆ ವಯಸಲಿ
ಅಳಕುತ್ತ ಕೇಳಿದೆ
ಅತ್ತೆ ಅತ್ತೆ ಸುತ್ತಾಡಲೆಂದು
ಬೈಕ್‌ನು ಕೊಡಿಸತ್ತೆ
ಹುಬ್ಬೇರಿಸಿ ಹೇಳಿದಳತ್ತೆ
ಬೈಕೂ ಇಲ್ಲ ನೀ ಲೈಕೂ ಇಲ್ಲ
ಶೋಕಿಗಾಗಿ ಕಾಸುಗಳೇನು
ಮರದಿಂದುದುರುತ್ತೇ?

ಇಪ್ಪತ್ತೈದನೆ ವಯಸಲಿ
ಸುಮ್ಮನೆ ಕೇಳಿದೆ
ಅತ್ತೆ ಅತ್ತೆ ಮದುವೆಗಾಗಿ
ಹೆಣ್ಣೊಂದ ನೋಡತ್ತೆ.
ಮುಖವರಳಿಸಿಬಿಟ್ಟಳತ್ತೆ
ಹೆಣ್ಣೂ ಇದೆ ಹೊನ್ನೂ ಇದೆ
ನಿನಗಾಗಿ ಕೊಡಲೆಂದಲೆ
ನಾನು ಮಗಳ ಹೆತ್ತೆ.

ತ್ರಿನೇತ್ರಜ್.